ಬೆಂಗಳೂರು: ಅವಹೇಳನಾಕಾರಿ ಹೇಳಿಕೆ ನೀಡಿದ್ದಾರೆಂಬ ಕಾರಣಕ್ಕೆ ಶಾಸಕ ಕೊತ್ತೂರು ಮಂಜುನಾಥ್ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಬೆಂಗಳೂರು ನಾಗರಿಕ ಹಕ್ಕು ಹೋರಾಟ ಸಮಿತಿ ಉಪಾಧ್ಯಕ್ಷ ಗಣೇಶ್ ಸಿಂಗ್ ಬಿ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾಶ್ಮೀರದ ಪಹಲ್ಗಾಮ್ ನಲ್ಲಿ 26 ಮಂದಿ ಹಿಂದೂ ಪುರುಷರನ್ನು ಅವರ ಕುಟುಂಬದವರ ಸಮ್ಮುಖದಲ್ಲೇ ಹತ್ಯೆ ಮಾಡಿದ್ದ ಪಾಕಿಸ್ತಾನ ಉಗ್ರರಿಗೆ ಸಂಬಂಧಿಸಿದಂತೆ ಭಾರತವು “ಆಪರೇಷನ್ ಸಿಂಧೂರ” ಹೆಸರಿನಲ್ಲಿ ನಡೆಸಿದ ಮಿಲಿಟರಿ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ಮತ್ತು 8 ವಾಯು ನೆಲೆಗಳನ್ನು ನಾಶ ಮಾಡಲಾಗಿದೆ. ಪಾಕಿಸ್ತಾನಕ್ಕೆ ಸೇರಿದ F – 16 ಯುದ್ಧ ವಿಮಾನ ಹಾಗೂ ಚೀನಾ ದೇಶದ ಕ್ಷಿಪಣಿಗಳನ್ನು ಮತ್ತು ಡ್ರೋನ್ ಗಳನ್ನು ನಾಶ ಮಾಡಿದ ಭಾರತೀಯ ಸೇನೆಯ ಪರಾಕ್ರಮಕ್ಕೆ ಇಡೀ ವಿಶ್ವದಾದ್ಯಂತ ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ಸಂದರ್ಭದಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕ ಕೊತ್ತೂರು ಮಂಜುನಾಥ್ ದೇಶದ್ರೋಹಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿದ್ದಾರೆ.
“ಭಾರತೀಯ ಸೇನೆ 4 ವಿಮಾನಗಳನ್ನು ಅತ್ತಿಂದ ಇತ್ತ ಇತ್ತಿಂದ ಅತ್ತ ಹಾರಾಡಿಸಿ ಬಡಾಯಿಕೊಚ್ಚಿಕೊಳ್ಳುತ್ತಿದೆ. ಪಾಕಿಸ್ತಾನದ ಮೇಲೆ ಭಾರತೀಯ ಸೇನೆ ನಡೆಸಿರುವ ದಾಳಿಗೆ ಸಾಕ್ಷ್ಯಗಳೇನು ?” ಎಂಬ ಹೇಳಿಕೆ ನೀಡುವ ಮೂಲಕ ಭಾರತ ದೇಶಕ್ಕೆ ಮತ್ತು ಭಾರತೀಯ ಸೇನೆಗೆ ಕಳಂಕ ಹಚ್ಚುವ ಮಾತುಗಳನ್ನಾಡಿ ದೇಶದ್ರೋಹದ ಹೇಳಿಕೆ ನೀಡಿದ್ದಾರೆ.
ದೇಶದ್ರೋಹದ ಮಾತುಗಳ ಮೂಲಕ 140 ಕೋಟಿ ಭಾರತೀಯರ ಭಾವನೆಗಳಿಗೆ ದಕ್ಕೆ ತಂದಿರುವ ಹಾಗೂ ಬಹಿರಂಗವಾಗಿ ಭಾರತ ದೇಶ, ಭಾರತೀಯ ಸೇನೆಗೆ ಅವಮಾನಕರ ಮಾತುಗಳನ್ನಾಡಿ ದೇಶದ್ರೋಹದ ಕಾರ್ಯವನ್ನೆಸಗಿರುವ ಶಾಸಕ ಕೊತ್ತೂರು ಮಂಜುನಾಥ್ ವಿರುದ್ಧ ಕೂಡಲೇ ದೇಶದ್ರೋಹದ ಪ್ರಕರಣ ಮತ್ತು ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿಕೊಳ್ಳಬೇಕೆಂದು ದೂರಿನಲ್ಲಿ ಕೋರಲಾಗಿದೆ.


















