ಮೈಸೂರು: ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ದುರಂತಕ್ಕೆ ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಕಾರಣ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಆಗ್ರಹಿಸಿದ್ದಾರೆ.
ಘಟನೆ ಸಂಬಂಧ ಮತ್ತಷ್ಟು ಮಾಹಿತಿ, ದಾಖಲೆಗಳ ಸಮೇತ ಮತ್ತೊಂದು ಮನವಿ ಪತ್ರ ನೀಡಿದ್ದಾರೆ. ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಮನವಿ ಮಾಡಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ದುರಂತದಲ್ಲಿ ಸಂಭವಿಸಿದ 11 ಜನರ ಸಾವಿನ ಸಂಬಂಧ ಪೂರಕವಾಗಿ ಮತ್ತಷ್ಟು ಮಾಹಿತಿ ಮತ್ತು ದಾಖಲಾತಿಗಳನ್ನು ನೀಡುತ್ತಿದ್ದೇನೆ ಎಂದಿದ್ದಾರೆ.
ಕೃತ್ಯಕ್ಕೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತವಾಗಿ ತಾವು ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ದಾವೆಗೆ ಸಂಬಂಧಿಸಿದಂತೆ ನನ್ನ ಅರ್ಜಿಗಳನ್ನು ಮತ್ತು ದಾಖಲಾತಿಗಳನ್ನು ಅಳವಡಿಸಿಕೊಳ್ಳಿ. ಕಾಲ್ತುಳಿತ ಕೃತ್ಯದಿಂದ 11 ಜನರು ಸಾವನ್ನಪ್ಪಿದ್ದಾರೆ. ಇದಕ್ಕೆ ಪ್ರಮುಖ ಕಾರಣಕರ್ತರಾಗಿರುವ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ರನ್ನು ಆರೋಪಿಯನ್ನಾಗಿಸಬೇಕು ಎಂದು ಮನವಿ ಮಾಡಿದ್ದಾರೆ.
ಅಲ್ಲದೇ, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ 123/2025 ಸಂಖ್ಯೆಯ ಪ್ರಕರಣದ ತನಿಖೆಯನ್ನು ನಡೆಸುವಂತೆ ಸಿಬಿಐಗೆ ಸೂಕ್ತ ಸೂಚನೆ ನೀಡಿ ಆದೇಶ ಹೊರಡಿಸಲು ಸ್ನೇಹಮಯಿ ಕೃಷ್ಣ ಮನವಿ ಮಾಡಿದ್ದಾರೆ.