ಬೆಂಗಳೂರು: ಕರ್ನಾಟಕದಲ್ಲಿ ಪ್ರವಾಹ ಪೀಡಿತ ರೈತರಿಗೆ ಬೆಳೆಹಾನಿ ಪರಿಹಾರಕ್ಕೆಂದು 2000 ಕೋಟಿ ರೂ. ನಿಗದಿ ಮಾಡಲಾಗಿದ್ದು, ವಿತರಣೆ ಪ್ರಕ್ರಿಯೆ ಆರಂಭಗೊಂಡಿದೆ. ಒಟ್ಟಾರೆ, 12.54 ಲಕ್ಷ ಹೆಕ್ಟೇರ್ ಬೆಳೆ ಹಾನಿ ಸಂಭವಿಸಿದ ಕಾರಣದಿಂದ 30 ದಿನಗಳಲ್ಲಿ ನೇರ ಬ್ಯಾಂಕ್ ಖಾತೆಗೆ ವರ್ಗಾವಣೆ ಮೂಲಕ ಹಣ ಪಾವತಿಸುವುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಭರವಸೆ ನೀಡಿದ್ದಾರೆ.
ಜೂನ್ ತಿಂಗಳಿನಿಂದ ಸೆಪ್ಟೆಂಬರ್ ಮೊದಲ ವಾರದವರೆಗೆ, ಭಾರೀ ಮಳೆಯಿಂದಾಗಿ ಸುಮಾರು 5.29 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. ಈ ಬಗ್ಗೆ ಸಮೀಕ್ಷೆ ಮಾಡಿ ಮಾಹಿತಿ ಕಲೆಹಾಕಲಾಗಿದೆ. ಪರಹಾರದ ಮೊತ್ತ ಪಾವತಿಗೆ ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರವು ತನ್ನ ಬೊಕ್ಕಸದಿಂದ ಪ್ರತಿ ಹೆಕ್ಟೇರ್‌ಗೆ 8,500 ರೂ.ಗಳನ್ನು ನೀಡುತ್ತಿದೆ. ಇದರಿಂದಾಗಿ ಮಳೆಯಾಶ್ರಿತ ಬೆಳೆಗಳಿಗೆ ಹೆಕ್ಟೇರ್‌ಗೆ 17,000 ರೂ.ಗಳು, ನೀರಾವರಿ ಬೆಳೆಗಳಿಗೆ 25,500 ರೂ.ಗಳು ಮತ್ತು ದೀರ್ಘಕಾಲಿಕ ಬೆಳೆಗಳಿಗೆ 31,000 ರೂ.ಗಳು ಪಾವತಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಜಮಾ ಮಾಡಲಾಗುವುದು. ರಾಜ್ಯ ಸರ್ಕಾರವು ಆಧಾರ್ ಆಧಾರಿತ ನೇರ ನಗದು ವರ್ಗಾವಣೆಯನ್ನು ಅನುಸರಿಸುತ್ತಿದೆ. ಇದು ಸಂಪೂರ್ಣ ಪಾರದರ್ಶಕ ವ್ಯವಸ್ಥೆಯಾಗಿದೆ ಮತ್ತು ಅತ್ಯಂತ ತ್ವರಿತ ಪಾವತಿಯಾಗುತ್ತಿದೆ ಎಂದು ಹೇಳಿದ್ದಾರೆ.