ಬೆಂಗಳೂರು : ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್ ಅವರ ವಿರುದ್ಧ ಭೂ ಒಡೆತನ ಯೋಜನೆಯ ಫಲಾನುಭವಿಗಳಿಂದ ಕಮಿಷನ್ ವಸೂಲಿ ಮಾಡಿದ ಆರೋಪ ಕೇಳಿಬಂದಿತ್ತು. ಇದೀಗ ರವಿಕುಮಾರ್ ನಿಗಮದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಸಿಎಂಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ̤
ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದ ಎಸ್. ರವಿಕುಮಾರ್ ಅವರ ವಿರುದ್ಧ ಭೂ ಒಡೆತನ ಯೋಜನೆಯಡಿ ಶೇ.60 ಕಮಿಷನ್ ಕೇಳಿದ ಆರೋಪ ಕೇಳಿಬಂದಿತ್ತು. ಇದೇ ಆರೋಪ ಇಂದು ರವಿಕುಮಾರ್ ಸಂಕಷ್ಟಕ್ಕೆ ಸಿಲುಕಲು ಕಾರಣ.
ಕರ್ನಾಟಕ ಭೋವಿ ಅಭಿವೃದ್ಧಿ ನಿಗಮವು ಭೋವಿ ಸಮುದಾಯದ ಭೂ ರಹಿತ ಕಾರ್ಮಿಕ ಮಹಿಳೆಯರಿಗೆ ಭೂ ಒಡೆತನ ಯೋಜನೆಯಡಿ ಅನುದಾನ ನೀಡುವುದಾಗಿದೆ. ಈ ಯೋಜನೆಯಡಿ ಸುಮಾರು 15 ಕೋಟಿ ರೂ. ವೆಚ್ಚದಲ್ಲಿ 60 ಎಕರೆ ಭೂಮಿಯನ್ನು ಖರೀದಿಸಿ ಫಲಾನುಭವಿಗಳಿಗೆ ಹಂಚಿಕೆ ಮಾಡುವ ಉದ್ದೇಶವಿತ್ತು. ಆದರೆ, ಈ ಯೋಜನೆಯ ಫಲಾನುಭವಿಗಳಿಂದ ಶೇ. 40 ರಿಂದ 60 ರಷ್ಟು ಕಮಿಷನ್ ವಸೂಲಿ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಜೆಡಿಎಸ್, ಬಿಜೆಪಿ ನಾಯಕರು ಈ ಬಗ್ಗೆ ನಿರಂತರ ಟೀಕೆ ಮಾಡುತ್ತಲೇ ಇದ್ದರು. ಅಲ್ಲದೇ ಸಿಎಂ ಸಿದ್ದರಾಮಯ್ಯ ಅವರು ಖುದ್ದಾಗಿ ರವಿಕುಮಾರ್ ಗೆ ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ಖಡಕ್ ಸೂಚನೆ ನೀಡಿದ್ದರು. ಇದೀಗ ಕೊನೆಗೂ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದ ಎಸ್ ರವಿ ಕುಮಾರ್ ಅವರು ರಾಜೀನಾಮೆ ನೀಡಿದ್ದಾರೆ.