ಬೆಂಗಳೂರು: ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿಕೆಯಾಗುತ್ತಿದ್ದು, ಜನ ಹೈರಾಣಾಗಿ ಹೋಗಿದ್ದಾರೆ. ಈ ಮಧ್ಯೆ ದಿನಸಿ ವಸ್ತುಗಳ ಬೆಲೆಯಲ್ಲಿ ಕೂಡ ಭಾರೀ ಏರಿಕೆಯಾಗುತ್ತಿದೆ. ಈಗ ಈ ಸಾಲಿಗೆ ಅಡುಗೆ ಎಣ್ಣೆ (Cooking Oil), ಕೊಬ್ಬರಿ ಎಣ್ಣೆ ಸೇರಿದೆ. ಬೆಲೆ ಕೇಳಿ ಜನರು ಶಾಕ್ ಆಗುತ್ತಿದ್ದಾರೆ.
ಕೊಬ್ಬರಿ ಎಣ್ಣೆ ದರ ಲೀಟರ್‌ಗೆ 300 ರೂ. ಗಡಿ ದಾಟಿದೆ. ಎಳನೀರು ಯಥೇಚ್ಛವಾಗಿ ಮಾರಾಟವಾಗುತ್ತಿರುವ ಹಿನ್ನೆಲೆಯಲ್ಲಿ ಕೊಬ್ಬರಿ ಬೇಡಿಕೆ ಪ್ರಮಾಣದಲ್ಲಿ ಪೂರೈಕೆಯಾಗುತ್ತಿಲ್ಲ. ಹೀಗಾಗಿ ತೆಂಗಿನ ಎಣ್ಣೆಯ ಮೇಲೆ ಗಗಕ್ಕೆ ಏರಿಕೆಯಾಗಿದೆ. 15 ಕೆಜಿ ಟಿನ್ ಕೊಬ್ಬರಿ ಎಣ್ಣೆ ದರ 4,600 ರೂಪಾಯಿ ಆಗಿದೆ.
ಸಾಧಾರಣವಾಗಿ ಮಾರ್ಚ್ ಮಧ್ಯಭಾಗದಿಂದ ರಾಜ್ಯದಲ್ಲಿ ಬಿಸಿಲು ಹೆಚ್ಚಳವಾಗುತ್ತದೆ. ಈ ಸಂದರ್ಭದಲ್ಲಿ ಕೊಬ್ಬರಿ ಎಣ್ಣೆಯ ಬಳಕೆ ಹೆಚ್ಚಾಗಿರುತ್ತದೆ. ಆದರೆ, ಇದೇ ಸಮಯದಲ್ಲಿ ಎಳೆನೀರಿನ ಬೇಡಿಕೆಯೂ ಏರಿಕೆಯಾಗುತ್ತದೆ. ಪರಿಣಾಮ ಎಳೆನೀರಿಗಾಗಿ ಕಾಯಿ ಹೆಚ್ಚು ಬಳಕೆಯಾಗುತ್ತಿರುವುದರಿಂದ ಕೊಬ್ಬರಿ ಎಣ್ಣೆಯ ಉತ್ಪಾದನೆ ಕುಗ್ಗಿದೆ. ಹೀಗಾಗಿ ದರ ಏರಿಕೆಯಾಗಿದೆ. ಸನ್ ಫ್ಲವರ್, ಪಾಮ್ ಆಯಿಲ್, ಕಡಲೇಕಾಯಿ ಎಣ್ಣೆ, ಅರಳೆಎಣ್ಣೆ ಹಾಗೂ ಸಾಸಿವೆ ಎಣ್ಣೆ ಕೂಡ 10-20 ರೂ. ರೂ. ಹೆಚ್ಚಾಗಿದೆ.
ಹಾಲಿನ ದರ ಏರಿಕೆಗಾಗಿ ರಾಜ್ಯ ಸರ್ಕಾರದ ಮೇಲೆ ಹಾಲು ಒಕ್ಕೂಟಗಳು ಒತ್ತಡ ಹೇರುತ್ತಿದ್ದು, ಲೀಟರ್ಗೆ 5 ರೂ. ಹೆಚ್ಚಳಕ್ಕೆ ಬೇಡಿಕೆ ಇಟ್ಟಿವೆ. ಹೀಗಾಗಿ ಹಾಲಿನ ದರ ಕೂಡ ಜನರಿಗೆ ಶಾಕ್ ನೀಡಲಿದೆ. ಬೆಲೆ ಏರಿಕೆಯ ಈ ಸುದ್ದಿ ಕೇಳಿ ಜನರು ಕಂಗಾಲಾಗಿದ್ದಾರೆ.