ಮ್ಯಾಂಚೆಸ್ಟರ್: ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಬೌಲಿಂಗ್ ವೈಫಲ್ಯಕ್ಕೆ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ತಂತ್ರಗಾರಿಕೆಯೇ ಕಾರಣ ಎಂದು ಮಾಜಿ ಕ್ರಿಕೆಟಿಗ ಸಂಜಯ್ ಮಾಂಜ್ರೇಕರ್ ಗಂಭೀರ ಆರೋಪ ಮಾಡಿದ್ದಾರೆ. ಪಂದ್ಯದ ನಿರ್ಣಾಯಕ ಹಂತದಲ್ಲಿ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಅವರನ್ನು ಬೌಲಿಂಗ್‌ಗೆ ಬಳಸಿಕೊಳ್ಳಲು ವಿಳಂಬ ಮಾಡಿದ ನಿರ್ಧಾರದ ವಿರುದ್ಧ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಂದ್ಯದ ಮೂರನೇ ದಿನದಾಟದಲ್ಲಿ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಭಾರತದ ವೇಗದ ಬೌಲರ್‌ಗಳನ್ನು ಸುಲಭವಾಗಿ ದಂಡಿಸುತ್ತಿದ್ದರೂ, ಯಶಸ್ವಿ ಸ್ಪಿನ್ನರ್ ವಾಷಿಂಗ್ಟನ್ ಸುಂದರ್‌ಗೆ ಬೌಲಿಂಗ್ ಮಾಡಲು ಅವಕಾಶ ನೀಡಿದ್ದು 69ನೇ ಓವರ್‌ನಲ್ಲಿ. ಅಲ್ಲಿಯವರೆಗೆ ವಿಕೆಟ್ ಪಡೆಯಲು ಪರದಾಡುತ್ತಿದ್ದ ಭಾರತಕ್ಕೆ, ಸುಂದರ್ ಬಂದ ಕೂಡಲೇ ಯಶಸ್ಸು ಸಿಕ್ಕಿತು. ಅವರು ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ಓಲ್ಲಿ ಪೋಪ್ ಮತ್ತು ಹ್ಯಾರಿ ಬ್ರೂಕ್ ಅವರ ವಿಕೆಟ್‌ಗಳನ್ನು ಪಡೆದು ತಂಡಕ್ಕೆ ಮರುಜೀವ ನೀಡುವ ಪ್ರಯತ್ನ ಮಾಡಿದರು.
ಈ ತಾಂತ್ರಿಕ ತಪ್ಪಿನ ಬಗ್ಗೆ ಕಾಮೆಂಟರಿ ವೇಳೆ ಮಾತನಾಡಿದ ಸಂಜಯ್ ಮಾಂಜ್ರೇಕರ್, “ಈ ವಿಚಿತ್ರ ನಿರ್ಧಾರದ ಹಿಂದಿನ ತರ್ಕವೇನು ಎಂಬುದು ನನಗೆ ಅರ್ಥವಾಗುತ್ತಿಲ್ಲ. ಒಬ್ಬ ಪರಿಣತ ಸ್ಪಿನ್ನರ್ ಲಭ್ಯವಿದ್ದರೂ, 68 ಓವರ್‌ಗಳ ಕಾಲ ಅವರನ್ನು ಬಳಸಿಕೊಳ್ಳದಿರುವುದು ದೊಡ್ಡ ತಪ್ಪು. ಇದಕ್ಕೆ ನಾನು ನಾಯಕ ಶುಭಮನ್ ಗಿಲ್ ಅವರಿಗಿಂತ ಹೆಚ್ಚಾಗಿ ಕೋಚ್ ಗೌತಮ್ ಗಂಭೀರ್ ಅವರನ್ನೇ ಹೊಣೆಗಾರರನ್ನಾಗಿ ಮಾಡುತ್ತೇನೆ,” ಎಂದು ಖಾರವಾಗಿ ನುಡಿದರು.
“ಶುಭಮನ್ ಗಿಲ್ ಇನ್ನೂ ಯುವ ನಾಯಕ, ಅವರಿಗೆ ಅನುಭವದ ಕೊರತೆ ಇದೆ. ಆದರೆ, ಡ್ರೆಸ್ಸಿಂಗ್ ರೂಮ್‌ನಲ್ಲಿ ಕುಳಿತಿರುವ ಅನುಭವಿ ಕೋಚ್ ಇಂತಹ ಸಂದರ್ಭಗಳಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವಂತೆ ನಾಯಕನಿಗೆ ಮಾರ್ಗದರ್ಶನ ನೀಡಬೇಕು,” ಎಂದು ಮಾಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ.