ಬೆಂಗಳೂರು : ಕಳೆದ 70 ವರ್ಷಗಳಿಂದ ಮೇಯರ್ಗಳ ಆಡಳಿತ ಕಂಡಿದ್ದ ಬಿಬಿಎಂಪಿ ಕಣ್ಮರೆಯಾಗಿ ಇತಿಹಾಸದ ಪುಟ ಸೇರಿದ್ದು, ದಿನೇ ದನೆ ಬೆಳೆಯುತ್ತಿರುವ ರಾಜಧಾನಿ ಬೆಂಗಳೂರನ್ನು ಭಾಗಗಳಾಗಿ ವಿಂಗಡಿಸಿ ಆಡಳಿತ ನಡೆಸುವ ‘ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಇತ್ತೀಚೆಗೆ ಜಾರಿಗೆ ಬಂದಿದೆ.
ಜಿಬಿಎ ಕೇಂದ್ರ ಕಛೇರಿಗೆ ಸಿಎಂ ಸಿದ್ದರಾಮಯ್ಯನವರು ನಾಳೆ ಭೇಟಿ ನೀಡಲಿದ್ದು, ಜಿಬಿಎ ಆಡಳಿತ ಬಂದ ನಂತರ ಕೇಂದ್ರ ಕಛೇರಿಗೆ ಸಿಎಂ ಸಿದ್ದರಾಮಯ್ಯನವರ ಮೊದಲ ಭೇಟಿ ಇದಾಗಿದೆ. ಈ ಹಿನ್ನೆಲೆ ಜಿಬಿಎ ಕೇಂದ್ರ ಕಛೇರಿಯಲ್ಲಿನ ಪೌರ ಸಭಾಂಗಣಕ್ಕೆ ಹೈಟೆಕ್ ಸ್ವರ್ಶ ನೀಡಲಾಗುತ್ತಿದ್ದು, ಹೊಸ ತಂತ್ರಜ್ಞಾನ ಬಳಸಿ ರಿನೋವೇಷನ್ ಮಾಡಲಾಗುತ್ತಿದೆ. ಕಳೆದ ನಾಲ್ಕು ವರ್ಷದಿಂದಲೂ ಪೌರ ಸಭಾಂಗಣದ ಕೆಲಸ ನಡೆಯುತ್ತಿದ್ದು, ಹಣಕಾಸು ಅಭಾವದಿಂದ ಕೆಲ ತಿಂಗಳಿಂದ ಸಭಾಂಗಣದ ಕೆಲಸ ನಿಂತಿತ್ತು. ಇದೀಗ ತರಾತುರಿಯಲ್ಲಿ ಸಭಾಂಗಣ ಕೆಲಸ ಪೂರ್ಣಗೊಳಿಸಲು ಅಧಿಕಾರಿಗಳು ಸಿದ್ದತೆ ಮಾಡುತ್ತಿದ್ದಾರೆ.
ಹಾಗೆಯೇ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಾಳೆ ಜಿಬಿಎ ಚೊಚ್ಚಲ ಸಭೆ ನಡೆಯಲಿದೆ. ಸಭೆಯಲ್ಲಿ ಕಳೆದ ಒಂದು ತಿಂಗಳಿಂದ ಜಿಬಿಎ ವ್ಯಾಪ್ತಿಯ 5 ನಗರಪಾಲಿಕೆಯ ಪ್ರಗತಿ ಹಾಗೂ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಯಲಿದೆ. ನಾಳಿನ ಜಿಬಿಎ ಸಭೆಯಲ್ಲಿ ಡಿಸಿಎಂ ಸೇರಿದಂತೆ ಬೆಂಗಳೂರಿನ ಎಲ್ಲಾ ಶಾಸಕರು, ಸಮಿತಿ ಸದಸ್ಯರು ಭಾಗಿಯಾಗಲಿದ್ದಾರೆ.