ಬೆಂಗಳೂರು: ಮುಡಾ ಹಗರಣದ ವಿಚಾರವಾಗಿ ಎಫ್ ಐಆರ್ ದಾಖಲಾಗಿದ್ದರೂ ಸಿಎಂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಕಾನೂನು ಕುಣಿಕೆ ಬಿಗಿಯುತ್ತಿದ್ದರೂ, ಭ್ರಷ್ಟ ಹಗರಣಗಳ ಕುರಿತು ನ್ಯಾಯಾಲಯಗಳು ನಿಮ್ಮ ವಿರುದ್ಧ ತೀರ್ಪು, ಆದೇಶಗಳನ್ನು ಪ್ರಕಟಿಸುತ್ತಿದ್ದರೂ ಕಾಂಗ್ರೆಸ್ ‘ಲಜ್ಜೆಗೆಟ್ಟಂತೆ ನಡೆದುಕೊಳ್ಳುತ್ತಿರುವ ನಡೆ’ ದೇಶದ ಇತಿಹಾಸದಲ್ಲಿ ಶಾಶ್ವತ ಕಪ್ಪು ಚುಕ್ಕೆಯಾಗಿ ಉಳಿಯಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೈತಿಕತೆಯನ್ನು ಗಾಳಿಗೆ ತೂರಿ ಭಂಡತನದ ಬಂಡೆಯಾಗಿರುವ ಸಿದ್ದರಾಮಯ್ಯ ನವರೇ, ದೂರು ನೀಡಲಾಯಿತು.ರಾಜ್ಯಪಾಲರು ಅನುಮತಿಯನ್ನೂ ಕೊಟ್ಟಾಯಿತು. ರಾಜ್ಯಪಾಲರ ಅನುಮತಿಯನ್ನು ಪ್ರಶ್ನಿಸಿದ್ದಕ್ಕೆ ಘನ ಉಚ್ಚ ನ್ಯಾಯಾಲಯವು ತೀರ್ಪು ನೀಡಿ ನೀವು ತನಿಖೆ ಎದುರಿಸುವುದಕ್ಕೆ ಆಧಾರಗಳಿವೆ ಎಂದು ಹೇಳಿಯಾಯಿತು ಎಂದಿದ್ದಾರೆ.
ಜನಪ್ರತಿನಿಧಿಗಳ ನ್ಯಾಯಾಲಯ ನೀವು ಆರೋಪಿ ಎಂದು ಪರಿಗಣಿಸಿ ಕ್ರಿಮಿನಲ್ ಅಪರಾಧಗಳ FIR ದಾಖಲಿಸುವಂತೆ ಲೋಕಾಯುಕ್ತಕ್ಕೆ ಸೂಚಿಸಿಯೂ ಆಯಿತು. ಲೋಕಾಯುಕ್ತ A1 ಆರೋಪಿ ಎಂದು FIR ದಾಖಲಿಸಿಯೂ ಆಯಿತು. ಕಳಂಕ ಹೊತ್ತ ನೀವು ಇನ್ನೂ ಎಲ್ಲಿಯ ತನಕ ಮುಖ್ಯಮಂತ್ರಿ ಸ್ಥಾನದ ಗೌರವ ಹಾಗೂ ಘನತೆಗೆ ಮಸಿ ಬಳಿದು ಕುಳಿತುಕೊಳ್ಳುವ ಉದ್ದೇಶ ಹೊಂದಿರುವಿರಿ ಎನ್ನುವುದನ್ನು ಕರ್ನಾಟಕದ ಜನತೆಗೆ ತಿಳಿಸಿಬಿಡಿ ಎಂದು ತಿಳಿಸಿದ್ದಾರೆ.
ವಿಪಕ್ಷ ನಾಯಕ ಆರ್ ಅಶೋಕ ಅವರು ಸಹ ತಮ್ಮ ಎಕ್ಸ್ ಪೋಸ್ಟ್ ನಲ್ಲಿ, ಸಿದ್ದರಾಮಯ್ಯ ಅವರು ಇದೇ ವಿತಂಡವಾದ ಮುಂದುವರಿಸಿದಲ್ಲಿ ಅವರ 40 ವರ್ಷಗಳ ರಾಜಕೀಯ ಜೀವನ ನಿರರ್ಥಕ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.