ಬೆಂಗಳೂರು: ಸಿಎಂ ಸಿದ್ದರಾಮಯ್ಯ ಪ್ರಸಕ್ತ ಸಾಲಿನ ಬಜೆಟ್ ಮಂಡಿಸಲು ತಯಾರಿ ನಡೆಸಿದ್ದಾರೆ. ಇದಕ್ಕಾಗಿ ಬಜೆಟ್ ಪೂರ್ವಭಾವಿ ಸಭೆ ಕೂಡ ನಡೆಸುತ್ತಿದ್ದಾರೆ. ಇಂದಿನಿಂದ ಐದು ದಿನಗಳ ಕಾಲ ಪೂರ್ವಭಾವಿ ಸಭೆ ನಡೆಸಲಿದ್ದಾರೆ.
ಇತ್ತೀಚೆಗಷ್ಟೇ ಎಡಗಾಲಿನ ಮಂಡಿ ನೋವಿನಿಂದಾಗಿ ವೈದ್ಯರು ಸಿಎಂಗೆ ವಿಶ್ರಾಂತಿ ಹೇಳಿದ್ದರು. ಹೀಗಾಗಿ ವಿಶ್ರಾಂತಿ ಪಡೆದಿರುವ ಸಿಎಂ, ಇಂದಿನಿಂದ ಸರಣಿ ಸಭೆ ನಡೆಸಲಿದ್ದಾರೆ. ಇಂದು ಬೆಳಗ್ಗೆ ಗೃಹ ಹಾಗೂ ಒಳಾಡಳಿತ ಇಲಾಖೆ, ಲೋಕೋಪಯೋಗಿ ಇಲಾಖೆ, ಕೈಗಾರಿಕೆ ಮತ್ತು ಮೂಲಸೌಕರ್ಯ ಇಲಾಖೆ, ಇಂಧನ ಇಲಾಖೆ, ಕಾರ್ಮಿಕ ಇಲಾಖೆಗಳ ಅಧಿಕಾರಿಕಗಳು ಹಾಗೂ ಸಚಿವರೊಂದಿಗೆ ಚರ್ಚೆ ನಡೆಸಲಿದ್ದಾರೆ.
ಮಧ್ಯಾಹ್ನ ಭೋಜನ ವಿರಾಮದ ಬಳಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆಹಾರ ಮತ್ತು ನಾಗರಿಕ ಪೂರೈಕೆ, ಸಹಕಾರ ಇಲಾಖೆ, ರೇಷ್ಮೆ, ಪಶುಸಂಗೋಪನೆ ಇಲಾಖೆಗಳ ಸಚಿವರು, ಅಧಿಕಾರಿಗಳ ಜತೆ ಸಿಎಂ ಚರ್ಚೆ ನಡೆಸಲಿದ್ದಾರೆ.
ಇಲಾಖಾವಾರು ಹಣಕಾಸಿನ ಹಂಚಿಕೆ, ಹೊಸ ಬೇಡಿಕೆ, ಹಿಂದೆ ನೀಡಿದ ಅನುದಾನ ಖರ್ಚು ವೆಚ್ಚ, ಬಾಕಿ, ಮುಂದುವರಿದ ಕಾಮಗಾರಿ, ಅನುದಾನ ಬಿಡುಗಡೆ, ಯೋಜನೆಗಳ ಅನುಷ್ಟಾನ ಸೇರಿದಂತೆ ಇಲಾಖೆಗಳ ಪೂರ್ಣ ವಿವರಗಳನ್ನು ಸಿಎಂ ಸಂಗ್ರಹಿಸಲಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರಿಗೆ ಗ್ಯಾರಂಟಿ ಯೋಜನೆಗೆ ಅನುದಾನ ಹಂಚಿಕೆ ಮತ್ತು ಆರ್ಥಿಕ ಸಂಪನ್ಮೂಲ ಕ್ರೂಢೀಕರಣವೇ ಬಹುದೊಡ್ಡ ಸವಾಲಾಗಿದೆ. ಆರ್ಥಿಕ ವರ್ಷ ಕಳೆದರೂ ಶೇ. 60ರಷ್ಟು ಅನುದಾನ ಬಿಡುಗಡೆಯಾಗಿಲ್ಲ ಎಂಬ ಆರೋಪವಿದ್ದು, ಇದು ಸಮಸ್ಯೆಗೆ ಕಾರಣವಾಗಿದೆ. ಈ ಬಾರಿ ಸಿಎಂ ಯಾವ ಗಾತ್ರದ ಬಜೆಟ್ ಮಂಡಿಸಲಿದ್ದಾರೆ. ಯಾವುದಕ್ಕೆ ಎಷ್ಟು ಅನುದಾನ ತೆಗೆದಿಡುತ್ತಾರೆ ಎಂಬುವುದನ್ನು ನೋಡಬೇಕಿದೆ.