ಬೆಳಗಾವಿ : ಸದನದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಶೂದ್ರರು, ಸಂವಿಧಾನ ಹಾಗೂ ಅನುಭವ ಮಂಟಪದ ಪರಿಕಲ್ಪನೆ ಕುರಿತು ಮಾತನಾಡಿದರು.
ಸುವರ್ಣಸೌಧದ ಮುಂಭಾಗದಲ್ಲಿ ಅನುಭವ ಮಂಟಪದ ತೈಲ ಚಿತ್ರ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸವಣ್ಣನವರ ಅನುಭವ ಮಂಟಪದಲ್ಲಿ ಎಲ್ಲ ಜಾತಿ, ವರ್ಗದ ಜನರು ಇರುತ್ತಿದ್ದರು. ಮಹಿಳಾ ಶರಣೆಯರು ಇರುತ್ತಿದ್ದರು. ಆಗ ಅಲ್ಲಿ ಸಮಾಜದ ಹಾಗು ಹೋಗುಗಳ ಬಗ್ಗೆ ಚರ್ಚೆ ನಡೆಯುತ್ತಿದ್ದವು. ಹೀಗಾಗಿ ಈಗ ಸುವರ್ಣಸೌಧದಲ್ಲಿ ಅನುಭವ ಮಂಟಪದ ತೈಲ ವರ್ಣಚಿತ್ರ ಅನಾವರಣ ಸೂಕ್ತವಾಗಿದೆ ಎಂದಿದ್ದಾರೆ.
ಅಲ್ಲದೇ, ಈ ವೇಲೆ ನಮ್ಮನ್ನೆಲ್ಲ ಹಿಂದೆ ಜಾತಿಯಿಂದ ಅಳೆಯುತ್ತಿದ್ದರು. ನಾವೆಲ್ಲರೂ ಶೂದ್ರರೇ. ಅಶೋಕ್ ನೀನು, ಅಶ್ವಥ್ ನಾರಾಯಣ್, ಯತ್ನಾಳ್ ನೀನು ಕೂಡ ಶೂದ್ರನೇ ತಿಳಿದುಕೋ ಎಂದು ಹೇಳಿದರು.
ಬಸವಣ್ಣನವರು ಅವರ ಕಾಲದಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಿದ್ದರು. ಮಹಿಳೆಯರು ಶೂದ್ರ ರೀತಿಯಲ್ಲಿ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದ ವೇಳೆ ಆಗ ಬಸವಣ್ಣ ಧರ್ಮವನ್ನು, ಬದುಕನ್ನು ಜನರಿಗೆ ತಿಳಿಸುವಂತಹ ಕೆಲಸ ಮಾಡಿದರು ಎಂದು ಹೇಳಿದ್ದಾರೆ.
ಮೇಲು ಕೀಳು, ಶ್ರೀಮಂತ, ಬಡವ ಎಂಬುವುದು ಹೋಗಬೇಕು. ಸಮಾಜದಲ್ಲಿ ಸಮಾನ ಅವಕಾಶ ಬರಬೇಕು. ಬಸವಣ್ಣ ಕರ್ಮ ಸಿದ್ಧಾಂತ ತೊಲಗಿಸಲು ಮುಂದಾಗಿದ್ದರು. ಹುಟ್ಟಿದಾಗ ಯಾರು ಅಸ್ಪೃಶ್ಯರಲ್ಲ. ಹಿಂದುಳಿದ, ಮುಂದುವರಿದವರೂ ಅಲ್ಲ. ಜಾತಿ ಆಧಾರದ ಮೇಲೆ ಪ್ರತಿಭೆ ಗುರುತಿಸುತ್ತಾರೆ. ಅದನ್ನು ಹೋಗಲಾಡಿಸಿದವರು ಬಸವಣ್ಣ ಎಂದರು. ಈ ವೇಳೆ ಪ್ರತಿಪಕ್ಷಗಳ ನಾಯಕರು ಕೂಡ ಇದ್ದರು.