ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಮುಸ್ಲಿಂರ ಚಾಂಪಿಯನ್ ಆಗಲು ಹೊರಟಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆದ ವಕ್ಫ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಬಂದ ನಂತರ ಮಿನಿ ಪಾಕಿಸ್ತಾನ ಮಾಡಲು ಹೊರಟಿದ್ದಾರೆ. ಲಾಲ್ ಬಾಗ್, ವಿಧಾನಸೌಧ ನಮ್ಮದು ಎಂದು ಹೇಳುತ್ತಿದ್ದಾರೆ. ಒಳ್ಳೊಳ್ಳೆ ಜಮೀನು ಇರುತ್ತದೆ ಅದು ವಕ್ಫ್ ಬೋರ್ಡ್ ಆಗಿದೆ. ಬಡವರು, ರೈತರು ಕಂಗಾಲಾಗಿದ್ದಾರೆ. ಸಿದ್ದರಾಮಯ್ಯ ಸಿಎಂ ಆದ ನಂತರ ಮುಸ್ಲಿಂರಿಗೆ ಕೊಂಬು ಬಂದಿದೆ ಎಂದು ಗುಡುಗಿದ್ದಾರೆ.
ರೈತರ ಜಮೀನು ಕಿತ್ತುಕೊಳ್ಳುವುದು ಕಾಂಗ್ರೆಸ್ ಗೆ ಸಣ್ಣ ವಿಚಾರವಾಗಿದೆ. ಕಾಂಗ್ರೆಸ್ ಅಧಿಕಾರದಲ್ಲಿ ಮುಸ್ಲಿಮರ ಓಲೈಕೆ ಆಗುತ್ತಿದೆ. ಅವರ ವಿರುದ್ಧದ ಪ್ರಕರಣ ಹಿಂಪಡೆಯಲಾಗುತ್ತಿದೆ. ನಾವಿದ್ದಾಗ ನಕ್ಸಲ್ ಇರಲಿಲ್ಲ. ಇವಾಗ ನಗರ ನಕ್ಸಲರು ಮತ್ತೆ ಕಾಣಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮುಡಾ ಹಗರಣ ಆಯ್ತು, ಇದೀಗ ರೇಷನ್ ಕಾರ್ಡ್ ನಲ್ಲಿ ದುಡ್ಡು ಹೊಡೆಯಲು ಹೊರಟಿದ್ದಾರೆ. ಇದು ಒಂದು ರೀತಿಯ ಜಿಹಾದ್. ವಕ್ಪ್ ನೋಟಿಸ್ ವಾಪಸ್ ಪಡೆದರೆ ಆಗಲ್ಲ, ಪಹಣಿಯಲ್ಲಿ ಬದಲಾವಣೆ ಆಗಬೇಕು. ಹೂ ಮಾರುವವರು, ಆಟೋ ಚಾಲಕರ ರೇಷನ್ ಕಾರ್ಡ್ ರದ್ದು ಮಾಡಲಾಗುತ್ತಿದೆ. ಇವರು ಸಿದ್ದರಾಮಯ್ಯ ಅಲ್ಲ, ಕನ್ನ ರಾಮಯ್ಯ ಎಂದು ಗುಡುಗಿದ್ದಾರೆ.