ಉಡುಪಿ: ಜಾತಿಗಣತಿ ಪಟ್ಟಿಯಲ್ಲಿ ಕ್ರೈಸ್ತ ಧರ್ಮಕ್ಕೆ ಹಿಂದೂ ಉಪಜಾತಿಗಳ ಸೇರ್ಪಡೆ ವಿಚಾರಕ್ಕೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಶಾಸಕ ಸುನಿಲ್ ಕುಮಾರ್ ಆಕ್ರೋಶ ಹೊರಹಾಕಿದ್ದಾರೆ. ಈ ಬಗ್ಗೆ ಉಡುಪಿಯಲ್ಲಿ ಮಾತನಾಡಿದ ಸುನಿಲ್ ಕುಮಾರ್, ಸಿಎಂ ಕ್ರಿಶ್ಚಿಯನ್ ಗರ್ಭಗುಡಿಯಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಕರ್ನಾಟಕದ ಪೋಪ್ ಆಗಲು ಹೊರಟಿದ್ದಾರೆ.
ಆಗ ಟಿಪ್ಪು ಪೋಷಾಕು, ಈಗ ಪಾದ್ರಿ ರೂಪದ ಆಡಳಿತ. ಸರ್ಕಾರ ಮುಲ್ಲಾ ಹಾಗೂ ಪಾದ್ರಿಗಳ ಕೈಗೊಂಬೆ ಆಗಲು ಹೊರಟಿದೆ. ಸಿದ್ದರಾಮಯ್ಯನವರು ಫಾದರ್ ಸಿದ್ರಾಮಯ್ಯ ಆಗಲು ಹೊರಟಿದ್ದಾರೆ. ಅಷ್ಟೆ ಅಲ್ಲದೇ ಫಾದರ್ ಸಿದ್ದರಾಮಯ್ಯನವರ ಹಿಂದೆ ಯಾರದೋ ಓಲೈಕೆ ಅಡಗಿದೆ ಎಂದು ಮಾಜಿ ಸಚಿವ ಸುನಿಲ್ ಕುಮಾರ್ ಕಿಡಿಕಾರಿದ್ದಾರೆ.
ಸಾಮಾಜಿಕ ನ್ಯಾಯದ ಆಶಯ ಶಿಲುಬೆಗೆ ಏರಿಸಬೇಡಿ, ದಲಿತರು, ಒಬಿಸಿಯನ್ನು ಮತಾಂತರಕ್ಕೆ ಕೈಹಾಕಿರೋದು ದುರಂತದ ಸಂಗತಿ. ಫಾದರ್ ಸಿದ್ದರಾಮಯ್ಯ ಕುಲಶಾಸ್ತ್ರದ ಅಧ್ಯಯನ ಮಾಡಬೇಕು. ಸಿದ್ದರಾಮಯ್ಯ ಸಂವಿಧಾನ ಹೇಗೆ ಅರ್ಥ ಮಾಡಿಕೊಂಡಿದ್ದಾರೋ ಗೊತ್ತಿಲ್ಲ. ಸರ್ಕಾರ ಕ್ರಿಶ್ಚಿಯನ್+75 ಉಪಜಾತಿ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಬೇಕು.
ನಾಳೆಯಿಂದ ಸಾರ್ವಜನಿಕರ ವಿರೋಧದ ನಡುವೆಯೂ ಜಾತಿಗಣತಿ ಮಾಡುತ್ತಿದ್ದಾರೆ. ಹಿಂದುಳಿದ ವರ್ಗಗಳ ಆಯೋಗಕ್ಕೆ ಜನ ಮುತ್ತಿಗೆ ಹಾಕುವುದಕ್ಕು ಮೊದಲು ಇದನ್ನು ಕೈಬಿಡಬೇಕು. ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ಅಡಿಪಾಯ ಎಂದು ಹೇಳುತ್ತಿದ್ದಾರೆ. ಆದರೆ, ಈ ಗೊಂದಲದ ನಡುವೆ ಒಳ್ಳೆಯ ವರದಿ ಕೈಸೇರಲು ಸಾಧ್ಯವಿಲ್ಲ. ಹೀಗಾಗಿ ಹಿಂದೂ ಜಾತಿ ಜೊತೆ ಕ್ರಿಶ್ಚಿಯನ್ ಹೆಸರು ತೆಗೆಯುವವರೆಗೂ ನಮ್ಮ ಹೋರಾಟ ನಡೆಯುತ್ತಿರುತ್ತೆ ಎಂದು ಸುನಿಲ್ ಕುಮಾರ್ ಹೇಳಿದ್ದಾರೆ



















