ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆ ಕೂಗು ಭಾರೀ ಸದ್ದು ಮಾಡುತ್ತಿದೆ. ಈ ಬಗ್ಗೆ ಚನ್ನಪಟ್ಟಣ ಶಾಸಕ ಸಿ.ಪಿ. ಯೋಗೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ಚಕ್ಕೆರೆ ಗ್ರಾಮದಲ್ಲಿ ಮಾತನಾಡಿದ ಅವರು, ನಾನು ಕಾಂಗ್ರೆಸ್ ಪಕ್ಷಕ್ಕೆ ಹೊಸಬ. ನಾನು ಶಾಸಕನಾಗಿ 6 ತಿಂಗಳು ಕಳೆದಿವೆ. ನನ್ನ ಪಾಡಿಗೆ ನಾನು ಕ್ಷೇತ್ರದ ಕೆಲಸ ಮಾಡಿಕೊಂಡಿದ್ದೇನೆ. ಕಾಂಗ್ರೆಸ್ ನಲ್ಲಿ ಬಹಳಷ್ಟು ಜನ ಹಿರಿಯರಿದ್ದಾರೆ. ಸರ್ಕಾರ ಚೆನ್ನಾಗಿ ನಡೆಯುತ್ತಿದೆ. ಈಗಾಗಲೇ ಡಿ.ಕೆ.ಶಿವಕುಮಾರ್ ಸಹ ಮಾತನಾಡಿದ್ದಾರೆ. ಪಕ್ಷದಲ್ಲಿ ಯಾವ ಗೊಂದಲ ಇಲ್ಲ ಎಂದಿದ್ದಾರೆ.
ಕೆಆರ್‌ಎಸ್ ನಲ್ಲಿ ಸಿಎಂ – ಡಿಸಿಎಂ ಇಬ್ಬರೂ ಕೈಕೈ ಹಿಡಿದುಕೊಂಡು ಭಿನ್ನಾಭಿಪ್ರಾಯ ಇಲ್ಲ ಎಂದಿದ್ದಾರೆ. ಆದರೆ ನಾವ್ಯಾಕೆ ಭಿನ್ನಾಭಿಪ್ರಾಯ ಸೃಷ್ಟಿ ಮಾಡಬೇಕು? ಆ ರೀತಿಯ ಅವಕಾಶ ಬಂದರೆ ಶಿವಕುಮಾರ್ ಸಿಎಂ ಆಗಲಿ ಎಂಬುವುದು ನಮ್ಮ ಅಭಿಪ್ರಾಯ. ಆ ಸಂದರ್ಭ ಇನ್ನು ಬಂದಿಲ್ಲ ಎನಿಸುತ್ತೆ. ಕೆಲವರು ಹೈಕಮಾಂಡ್ ತೀರ್ಮಾನ ಅಂತಾರೆ. ಕೆಲವರು ಶಾಸಕರ ತೀರ್ಮಾನ ಅಂತಾರೆ. ಹೀಗಾಗಿ ನಾವ್ಯಾಕೆ ಗೊಂದಲಕ್ಕೆ ಸಿಲುಕಬೇಕು.
ಅಂತಹ ಸಂದರ್ಭ ಬಂದರೆ ತೀರ್ಮಾನ ಮಾಡುತ್ತೇವೆ. ಡಿಕೆಶಿ ಸಿಎಂ ಆಗಬೇಕು ಅಂತ ಬಯಸುತ್ತಿದ್ದಾರೆ. ನಾವು ಬಯಸುತ್ತೇವೆ. ಯಾವಾಗ ಏನು ಎಂಬುವುದನ್ನು ಪಕ್ಷ, ಹೈಕಮಾಂಡ್ ತೀರ್ಮಾನ ಮಾಡಬೇಕು ಎಂದು ಪರೋಕ್ಷವಾಗಿ ಡಿಕೆಶಿ ಪರ ಯೋಗೇಶ್ವರ್ ಬ್ಯಾಟ್ ಬೀಸಿದ್ದಾರೆ.



















