ಬೆಂಗಳೂರು: ಹಾಸನದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಬಹಿರಂಗ ಸಭೆ ನಡೆಸಲು ತೀರ್ಮಾನ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮೈಸೂರು, ಚಾಮರಾಜನಗರ, ಕೊಡಗು, ಮಂಡ್ಯ, ಹಾಸನ ಸೇರಿದಂತೆ ಐದು ಜಿಲ್ಲೆಗಳ ಅಹಿಂದ ಸಮಾವೇಶ ನಡೆಸಲು (Ahinda Samavesha) ಸಿದ್ದರಾಮಯ್ಯ ಮುಂದಾಗಿದ್ದಾರೆ ಎನ್ನಲಾಗಿದೆ. ಈಗಾಗಲೇ ವಿರೋಧಿಗಳು ಅವರ ವಿರುದ್ಧ ಆಕ್ಟೀವ್ ಆದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅಹಿಂದ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ ಎಂದು ಮೂಲಗಳಿಂದ ಗೊತ್ತಾಗಿದೆ. ಇದಕ್ಕೆ ಹಲವಾರು ಸಚಿವರು, ಶಾಸಕರು, ಮುಖಂಡರು, ಆಪ್ತರು ಸಾಥ್ ನೀಡುತ್ತಿದ್ದಾರೆ ಎನ್ನಲಾಗುತ್ತಿದೆ.
ಸಮಾವೇಶಕ್ಕೆ ದೇವೇಗೌಡ ಹಾಗೂ ಕುಮಾರಸ್ವಾಮಿ ಜಿಲ್ಲೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಡಿಸೆಂಬರ್ 5 ರಂದು ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರ (HD Devegowda) ತವರು ಜಿಲ್ಲೆ ಹಾಸನದಲ್ಲೇ (Hassana) ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ, ದಲಿತ) ಸಮಾವೇಶ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಹಾಸನ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಹಾಗೂ ಸಚಿವ ಮಹಾದೇವಪ್ಪ ಅವರಿಗೆ ಸಮಾವೇಶದ ಉಸ್ತುವಾರಿ ವಹಿಸಿದ್ದಾರೆ.. ಹೈಕಮಾಂಡ್ ಜೊತೆ ನಾನು ಮಾತನಾಡುತ್ತೇನೆ. ನೀವು ತಯಾರಿ ಮಾಡಿಕೊಳ್ಳಿ ಎಂದು ಆಪ್ತರಿಗೆ ಸಿಎಂ ಸೂಚಿಸಿದ್ದಾರೆ ಎಂದು ಕೂಡ ತಿಳಿದು ಬಂದಿದೆ.