ಬೆಳಗಾವಿ: ಸರ್ಕಾರಿ ಜಾಗದಲ್ಲಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣ ವಿಚಾರಕ್ಕೆ ಕಲ್ಲು ತೂರಾಟ ನಡೆದಿದ್ದು, ಈ ವೇಳೆ ಓರ್ವ ವೃದ್ಧನಿಗೆ ಗಾಯವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೇಶನೂರ ಗ್ರಾಮದಲ್ಲಿ ನಡೆದಿದೆ.
ವಾಲ್ಮೀಕಿ ಭವನ ನಿರ್ಮಾಣ ಸಂಬಂಧ ಸರ್ವೇ ಕಾರ್ಯಕ್ಕೆ ಬಂದ ವೇಳೆ ಎಸ್ಸಿ ಅವರ ಮನೆ ಬಳಿ ಇವೆಲ್ಲ ಯಾಕೆ ಎಂದು ಗ್ರಾಮದ ಸದಾಶಿವ ಭಜಂತ್ರಿ ಕುಟುಂಬ ತಕರಾರು ತೆಗೆದಿದೆ. ಇದೇ ವಿಚಾರಕ್ಕೆ ವಾಗ್ವಾದ ಕೂಡ ಆರಂಭವಾಗಿದ್ದು, ಆರಂಭದಲ್ಲಿ ಭಜಂತ್ರಿ ಕುಟುಂಬದವರು ಎಸ್ಟಿ ಸಮುದಾಯದವರಿಗೆ ಅವಾಚ್ಯವಾಗಿ ನಿಂದಿಸಿದ್ದಾರೆ. ಇದೇ ಕಾರಣಕ್ಕೆ ಆಕ್ರೋಶಗೊಂಡ ಸಮುದಾಯದ ಜನರು ಗುಂಪು ಕಟ್ಟಿಕೊಂಡು ಬಂದು ಸದಾಶಿವ ಭಜಂತ್ರಿ ಮನೆಗೆ ನುಗ್ಗಿದ್ದಾರೆ. ಮನೆಯಲ್ಲಿ ಅಡಗಿ ಕುಳಿತರೂ ಬಿಡದೆ ಮನೆ ಮೇಲೆ ಕಲ್ಲು ತೂರಿ, ಕಟ್ಟಿಗೆಯಿಂದ ಬಾಗಿಲಿಗೆ ಹೊಡೆದು ಅವುಗಳನ್ನು ಮುರಿದ್ದಾರೆ. ಈ ವೇಳೆ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿರುವ ಜೊತೆಗೆ ಮಹಿಳೆಯರಿಗೆ ಅವಾಚ್ಯವಾಗಿ ನಿಂದಿಸಿ, ಜೀವ ಬೆದರಿಕೆ ಕೂಡ ಹಾಕಿರುವ ಆರೋಪ ಕೇಳಿಬಂದಿದೆ.
ಅಷ್ಟಕ್ಕೂ ಗ್ರಾಮದಲ್ಲಿ ವಾಲ್ಮೀಕಿ ಭವನ ನಿರ್ಮಾಣ ಮಾಡಲು ಉದ್ದೇಶಿಸಿರುವ ಜಾಗ ಭಜಂತ್ರಿ ಕುಟುಂಬಕ್ಕೆ ಸೇರಿದ್ದಲ್ಲ. ಸರ್ಕಾರಿ ಗೈರಾಣು ಜಾಗದಲ್ಲಿ ಕಾಮಗಾರಿ ನಡೆಸಲು ಮುಂದಾಗಿದ್ದರೂ ವಿರೋಧ ಮಾಡ್ತಿರೋದು ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ.ಈ ಘಟನೆಯಲ್ಲಿ ವೃದ್ಧೆಯೊಬ್ಬರು ಗಾಯಗೊಂಡಿದ್ದು ಅವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಬೆಳಗಾವಿ ಎಸ್‌ಪಿ ಕೆ.ರಾಮರಾಜನ್ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಗ್ರಾಮದಲ್ಲಿ ಬೀಡುಬಿಟ್ಟಿದ್ದು, ಗ್ರಾಮದ ಸ್ಥಿತಿ ಸದ್ಯ ಬೂದಿ ಮುಚ್ಚಿದ ಕೆಂಡದಂತಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.
ಇದನ್ನೂ ಓದಿ: ಕೊಲ್ಲಂ SAI ಸ್ಪೋರ್ಟ್ಸ್ ಹಾಸ್ಟೆಲ್‌ನಲ್ಲಿ ಇಬ್ಬರು ಹುಡುಗಿಯರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ!


















