ಪಟ್ನಾ: ಚುನಾವಣಾ ಆಯೋಗವು ಬಿಹಾರದಲ್ಲಿ ನಡೆಸುತ್ತಿರುವ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯ ಭಾಗವಾಗಿ ನಡೆಸಿದ ಮತದಾರರ ಪಟ್ಟಿಗಳ ಸಮೀಕ್ಷೆಯಲ್ಲಿ ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿದೆ. ನೇಪಾಳ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ನಿಂದ ಬಂದ ಅನೇಕ ವಿದೇಶಿ ಪ್ರಜೆಗಳು ರಾಜ್ಯದ ಮತದಾರರ ಪಟ್ಟಿಗಳಲ್ಲಿ ಸ್ಥಾನ ಪಡೆದಿರುವುದು ಪತ್ತೆಯಾಗಿದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ. ಈ ವಿದೇಶಿ ಪ್ರಜೆಗಳು ಅಕ್ರಮ ಮಾರ್ಗಗಳ ಮೂಲಕ ಆಧಾರ್ ಕಾರ್ಡ್, ಶಾಶ್ವತ ನಿವಾಸ ಪ್ರಮಾಣಪತ್ರ ಮತ್ತು ರೇಷನ್ ಕಾರ್ಡ್‌ಗಳಂತಹ ಭಾರತೀಯ ದಾಖಲೆಗಳನ್ನು ಪಡೆದಿದ್ದಾರೆ ಎಂದು ಮೂಲಗಳು ಹೇಳಿವೆ.
ಬ್ಲಾಕ್ ಮಟ್ಟದ ಅಧಿಕಾರಿಗಳು ಮನೆ-ಮನೆ ಸಮೀಕ್ಷೆ ನಡೆಸಿದಾಗ ಈ ರೀತಿಯ ಅನೇಕ ಪ್ರಕರಣಗಳನ್ನು ಗುರುತಿಸಿದ್ದು, ಈ ಆರೋಪಗಳ ಕುರಿತು ಆಗಸ್ಟ್ 1 ರಿಂದ ಆಗಸ್ಟ್ 30 ರವರೆಗೆ ವಿವರವಾದ ತನಿಖೆ ನಡೆಯಲಿದೆ. ಆರೋಪಗಳು ಸಾಬೀತಾದರೆ, ಈ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗುವುದು ಎಂದು ಮೂಲಗಳು ಖಚಿತಪಡಿಸಿವೆ.
ವಿಧಾನಸಭೆ ಚುನಾವಣೆಗೂ ಮುನ್ನವೇ ವಿವಾದ
ಬಿಹಾರ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳುಗಳು ಇರುವಂತೆ ಈ ಬೆಳವಣಿಗೆ ನಡೆದಿದ್ದು, ಮತದಾರರ ಪಟ್ಟಿಗಳ ತಿದ್ದುಪಡಿ ಕುರಿತು ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಚರ್ಚೆಗೆ ಮತ್ತಷ್ಟು ಕಾವು ನೀಡಿದೆ. ಜೂನ್ 24 ರಂದು ಪ್ರಾರಂಭವಾದ ಈ ವಿಶೇಷ ತಿದ್ದುಪಡಿ ಪ್ರಕ್ರಿಯೆಯು ಅರ್ಹ ನಾಗರಿಕರ ಹೆಸರುಗಳನ್ನು ಸೇರಿಸುವುದು ಮತ್ತು ಅನರ್ಹ ಮತದಾರರನ್ನು ತೆಗೆದುಹಾಕುವ ಉದ್ದೇಶವನ್ನು ಹೊಂದಿದೆ. ಬಿಹಾರದಲ್ಲಿ ಇಂತಹ ಸಮಗ್ರ ತಿದ್ದುಪಡಿ ಕೊನೆಯದಾಗಿ 2003ರಲ್ಲಿ ನಡೆದಿತ್ತು. ತ್ವರಿತ ನಗರೀಕರಣ, ವಲಸೆ, ಯುವ ಮತದಾರರ ಸೇರ್ಪಡೆ, ಸಾವುಗಳ ಕುರಿತು ವರದಿ ಮಾಡದಿರುವುದು ಮತ್ತು ಅಕ್ರಮ ವಿದೇಶಿಯರ ಹೆಸರುಗಳ ಸೇರ್ಪಡೆಯಂತಹ ಅನೇಕ ಕಾರಣಗಳಿಗಾಗಿ ಈ ತಿದ್ದುಪಡಿ ಅಗತ್ಯವಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಪ್ರತಿಪಕ್ಷಗಳಿಂದ ತೀವ್ರ ಆಕ್ಷೇಪ
ಈ ಪ್ರಕ್ರಿಯೆಯನ್ನು ನಡೆಸುತ್ತಿರುವ ಸಮಯದ ಬಗ್ಗೆ ವಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಾಗ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲ ಎಂದು ಅವು ವಾದಿಸಿವೆ. ಆರ್‌ಜೆಡಿ ಮತ್ತು ಕಾಂಗ್ರೆಸ್ ಪಕ್ಷಗಳು ಈ ವಿಶೇಷ ತಿದ್ದುಪಡಿಯು ಕೆಲವು ಮತದಾರರನ್ನು ಉದ್ದೇಶಪೂರ್ವಕವಾಗಿ ಮತದಾನದಿಂದ ಹೊರಗಿಡಲು ನಡೆಸಲಾಗುತ್ತಿರುವ “ಷಡ್ಯಂತ್ರ” ಎಂದು ಆರೋಪಿಸಿವೆ. ಈ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಬಿಜೆಪಿ, ನೈಜ ಮತದಾರರ ಪರಿಶೀಲನೆ ಮತ್ತು ಅಕ್ರಮ ಮತದಾರರನ್ನು ತೆಗೆದುಹಾಕುವುದಕ್ಕೆ ವಿರೋಧ ಪಕ್ಷಗಳಿಗೆ ಏಕೆ ನೋವಾಗುತ್ತಿದೆ ಎಂದು ಪ್ರಶ್ನಿಸಿದೆ.
ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ, ವಿಚಾರಣೆ
ಈ ವಿವಾದವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಚುನಾವಣಾ ಆಯೋಗದ ಮತದಾರರ ಪಟ್ಟಿ ತಿದ್ದುಪಡಿ ಪ್ರಕ್ರಿಯೆಯನ್ನು ಪ್ರಶ್ನಿಸಿ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ. ಅರ್ಜಿದಾರರಲ್ಲಿ ಆರ್‌ಜೆಡಿ ಸಂಸದ ಮನೋಜ್ ಝಾ, ‘ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಎಂಬ ಸಂಸ್ಥೆ,, ‘ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಎಂಬ ನಾಗರಿಕ ಹಕ್ಕುಗಳ ಸಂಘಟನೆ, ಹೋರಾಟಗಾರ ಯೋಗೇಂದ್ರ ಯಾದವ್, ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಮತ್ತು ಮಾಜಿ ಶಾಸಕ ಮುಜಾಹಿದ್ ಆಲಂ ಸೇರಿದ್ದಾರೆ.
ಕಳೆದ ಗುರುವಾರ ಸುಪ್ರೀಂ ಕೋರ್ಟ್ ನಲ್ಲಿ ನಡೆದ ವಿಚಾರಣೆಯಲ್ಲಿ, ಈ ಪ್ರಕ್ರಿಯೆಯ ಸಮಯ ಮತ್ತು ಸ್ವೀಕರಿಸಿದ ದಾಖಲೆಗಳ ಕುರಿತು ಪ್ರಮುಖ ಪ್ರಶ್ನೆಗಳನ್ನು ನ್ಯಾಯಪೀಠ ಎತ್ತಿದ್ದು, ಚುನಾವಣಾ ಆಯೋಗವು ಆಧಾರ್ ಕಾರ್ಡ್ ನಾಗರಿಕತ್ವದ ಪ್ರಮಾಣವಲ್ಲ ಎಂದು ವಾದಿಸಿದಾಗ, ಆಧಾರ್, ರೇಷನ್ ಕಾರ್ಡ್ ಮತ್ತು ಚುನಾವಣಾ ಆಯೋಗವು ಒದಗಿಸಿರುವ ಗುರುತಿನ ಚೀಟಿಗಳನ್ನು ಮತದಾರರ ಗುರುತುವಿಕೆಯನ್ನು ಮರು-ಪರಿಶೀಲಿಸಲು ಮಾನ್ಯ ದಾಖಲೆಗಳಾಗಿ ಪರಿಗಣಿಸಬೇಕು ಎಂದು ನ್ಯಾಯಾಲಯ ತಿಳಿಸಿತ್ತು. ಆದರೆ ಮತದಾರರ ಪಟ್ಟಿ ಪರಿಷ್ಕರಣೆಗೆ ತಡೆಯಾಜ್ಞೆ ನೀಡಲು ಕೋರ್ಟ್ ನಿರಾಕರಿಸಿದೆ.