ಬೆಂಗಳೂರು: ಹುಟ್ಟುಹಬ್ಬದ ಸಂಭ್ರಮದಲ್ಲಿ ಇರುವ ನಟ ಕಿಚ್ಚ ಸುದೀಪ್ ಮುಂದಿನ ಸಿನಿಮಾ ಹಾಗೂ ಮುಂದಿನ ಯೋಜನೆಗಳ ಬಗ್ಗೆ ಅಭಿಮಾನಿಗಳಿಗೆ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ ಸುದೀಪ್, “ಕಿಚ್ಚ 47” ಸಿನಿಮಾ ಕ್ರಿಸ್ ಮಸ್ ಗೆ ಬರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಪಾರ್ಕ್ ಅನ್ನು ದತ್ತು ತೆಗೆದುಕೊಂಡು ಅಮ್ಮನ ಹೆಸರಲ್ಲಿ ಸಸಿ ನೆಡುತ್ತಿದ್ದೇನೆ ಎಂದು ಹೇಳಿದ್ದಾರೆ.
ನಾಳೆ (ಮಂಗಳವಾರ) ಒಂದು ವೀಡಿಯೋ ಬಿಡುಗಡೆ ಮಾಡುತ್ತಿದ್ದೇವೆ. ಅದರಲ್ಲಿ ವಿಷ್ಣುವರ್ಧನ್ ರ ಜಾಗ ಖರೀದಿ ಸೇರಿದಂತೆ ಸ್ಮಾರಕ ಹೇಗಿರಲಿದೆ ಎಂಬುದು ತಿಳಿಯಲಿದೆ. ಒಂದು ಕಡೇ ಆ ಬಗ್ಗೆ ಕಿತ್ತಾಟ ನಡೆಯುತ್ತಿದೆ. ಕಾನೂನು ಹೋರಾಟ ಕೂಡ ಇದೆ. ಅದರ ಪಾಡಿಗೆ ಅದು ನಡೆಯಲಿ. ನಮ್ಮ ಪಾಡಿಗೆ ನಾವು ನಮ್ಮ ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಕಿಚ್ಚ ರಾಜಕೀಯಕ್ಕೆ ಬರುವ ಸಾಧ್ಯತೆ ಇದೆಯಾ ? ಎಂಬ ವರದಿಗಾರರೊಬ್ಬರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸುದೀಪ್, ಸದ್ಯಕ್ಕೆ ರಾಜಕೀಯಕ್ಕೆ ಬರುವ ಅಲೋಚನೆ ನನಗೆ ಇಲ್ಲ. ಆಗಾಗ ಕೆಲವರು ರಾಜಕೀಯದ ಬಗ್ಗೆ ಯೋಚನೆ ಮಾಡುವಂತೆ ಮಾಡುತ್ತಾರೆ. ಈಗ ಸಿದ್ದರಾಮಯ್ಯ ಅವರಿಗೆ ಅವರದ್ದೆ ಅದ ತಲೆನೋವು ಇದೆ. ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಆಲೋಚನೆ ಅವರಿಗಿಲ್ಲ. ನಾನು ನನ್ನ ಕೆಲವು ಕಾರ್ಯಕ್ರಮಗಳಿಗಾಗಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುತ್ತೇವೆ ಬಿಟ್ಟರೇ ಮತ್ತೇನೂ ಇಲ್ಲ ಎಂದು ಹೇಳಿದ್ದಾರೆ.



















