ಸಂಭಲ್ (ಉತ್ತರ ಪ್ರದೇಶ): ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪತ್ನಿ ಮತ್ತು ಆಕೆಯ ಪ್ರಿಯಕರ ಸೇರಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಉತ್ತರ ಪ್ರದೇಶದ ಸಂಭಲ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಹತ್ಯೆಯ ನಂತರ ಮೃತದೇಹವನ್ನು ಗ್ರೈಂಡರ್ ಬಳಸಿ ಪುಡಿಗೈದು, ದೇಹದ ಭಾಗಗಳನ್ನು ಚರಂಡಿ ಮತ್ತು ಗಂಗಾ ನದಿಗೆ ಎಸೆದಿರುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಪತ್ನಿ ರೂಬಿ ಮತ್ತು ಆಕೆಯ ಪ್ರಿಯಕರ ಗೌರವ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಚಂದೌಸಿ ಪ್ರದೇಶದ ಮೊಹಲ್ಲಾ ಚುನ್ನಿ ನಿವಾಸಿಯಾದ ರಾಹುಲ್ (38) ನವೆಂಬರ್ 18 ರಂದು ನಾಪತ್ತೆಯಾಗಿದ್ದಾರೆ ಎಂದು ಅವರ ಪತ್ನಿ ರೂಬಿ ಪೊಲೀಸರಿಗೆ ದೂರು ನೀಡಿದ್ದರು. ಆದರೆ, ಡಿಸೆಂಬರ್ 15 ರಂದು ಈದ್ಗಾ ಪ್ರದೇಶದ ಚರಂಡಿಯೊಂದರಲ್ಲಿ ತಲೆ, ಕೈ ಮತ್ತು ಕಾಲುಗಳಿಲ್ಲದ ವಿರೂಪಗೊಂಡ ಮೃತದೇಹವೊಂದು ಪತ್ತೆಯಾಗಿತ್ತು.

ಪತ್ತೆಯಾದ ಮೃತದೇಹದ ಮೇಲೆ ‘ರಾಹುಲ್’ ಎಂದು ಹಚ್ಚೆ (ಟ್ಯಾಟೂ) ಹಾಕಿರುವುದು ಕಂಡುಬಂದಿತ್ತು. ಇದರ ಆಧಾರದ ಮೇಲೆ ಮತ್ತು ನಾಪತ್ತೆಯಾದವರ ಪಟ್ಟಿಯನ್ನು ಪರಿಶೀಲಿಸಿದಾಗ, ರಾಹುಲ್ ಅವರ ಮೊಬೈಲ್ ಫೋನ್ ನವೆಂಬರ್ 18 ರಿಂದ ಸ್ವಿಚ್ ಆಫ್ ಆಗಿರುವುದು ಪೊಲೀಸರ ಗಮನಕ್ಕೆ ಬಂತು. ತಾಂತ್ರಿಕ ತನಿಖೆಯ ಜಾಡು ಹಿಡಿದ ಪೊಲೀಸರಿಗೆ ಪತ್ನಿ ರೂಬಿ ಮೇಲೆ ಅನುಮಾನ ವ್ಯಕ್ತವಾಯಿತು.
ತೀವ್ರ ವಿಚಾರಣೆ ವೇಳೆ ರೂಬಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ತಾನು ಮತ್ತು ತನ್ನ ಪ್ರಿಯಕರ ಗೌರವ್ ಅನೈತಿಕ ಸಂಬಂಧದಲ್ಲಿರುವುದನ್ನು ಪತಿ ರಾಹುಲ್ ನೋಡಿದ್ದರಿಂದ ಈ ಕೃತ್ಯ ಎಸಗಿರುವುದಾಗಿ ಬಾಯಿಬಿಟ್ಟಿದ್ದಾಳೆ.
ಕೃತ್ಯ ಎಸಗಿದ್ದು ಹೇಗೆ?
ಆರೋಪಿಗಳಿಬ್ಬರೂ ಸೇರಿ ರಾಹುಲ್ ಮೇಲೆ ಕಬ್ಬಿಣದ ರಾಡ್ ಮತ್ತು ಕುಟ್ಟಾಣಿಯಿಂದ ಹಲ್ಲೆ ನಡೆಸಿ ಸ್ಥಳದಲ್ಲೇ ಕೊಲೆ ಮಾಡಿದ್ದಾರೆ. ನಂತರ ಮೃತದೇಹವನ್ನು ವಿಲೇವಾರಿ ಮಾಡಲು ವುಡ್ ಕಟ್ಟರ್/ಗ್ರೈಂಡರ್ (Grinder) ಬಳಸಿ ದೇಹವನ್ನು ಹಲವು ತುಂಡುಗಳಾಗಿ ಕತ್ತರಿಸಿದ್ದಾರೆ. ದೇಹದ ಒಂದು ಭಾಗವನ್ನು ಚರಂಡಿಗೆ ಎಸೆದರೆ, ಉಳಿದ ಭಾಗಗಳನ್ನು ರಾಜ್‌ಘಾಟ್‌ಗೆ ತೆಗೆದುಕೊಂಡು ಹೋಗಿ ಗಂಗಾ ನದಿಗೆ ಎಸೆದಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕೆ.ಕೆ. ಬಿಷ್ಣೋಯ್ ತಿಳಿಸಿದ್ದಾರೆ.
ಪೊಲೀಸರು ಕೃತ್ಯಕ್ಕೆ ಬಳಸಲಾದ ಗ್ರೈಂಡರ್, ಸುತ್ತಿಗೆ ಮತ್ತು ಇತರೆ ಆಯುಧಗಳನ್ನು ವಶಪಡಿಸಿಕೊಂಡಿದ್ದಾರೆ. ಮೃತದೇಹದ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ರಾಹುಲ್ ಅವರ ಮಕ್ಕಳ ಡಿಎನ್‌ಎ ಜೊತೆ ಹೋಲಿಕೆ ಮಾಡಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ಹಾಸನದಲ್ಲಿ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ | ಗಂಡು ಮಗುವಿಗೆ ಜನ್ಮ ನೀಡಿದ ಬಾಲಕಿ : ಆರೋಪಿ ಸೆರೆ



















