ನವದೆಹಲಿ: 2020ರಲ್ಲಿ ಗಲ್ವಾನ್ ಕಣಿವೆಯಲ್ಲಿ ಭಾರತೀಯ ಸೈನಿಕರ ಪರಾಕ್ರಮಕ್ಕೆ ತತ್ತರಿಸಿದ್ದ ಚೀನಾ, ಈಗ ಬೆಳ್ಳಿತೆರೆಯ ಮೇಲೆ ಆ ಶೌರ್ಯಗಾಥೆ ಮರುಕಳಿಸುವುದನ್ನು ಕಂಡು ನಡುಗುತ್ತಿದೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ‘ಬ್ಯಾಟಲ್ ಆಫ್ ಗಲ್ವಾನ್’ (Battle of Galwan) ಚಿತ್ರದ ಟೀಸರ್ ಬಿಡುಗಡೆಯಾದ ಬೆನ್ನಲ್ಲೇ, ತನಗಾಗಿರುವ ಮುಖಭಂಗವನ್ನು ಮುಚ್ಚಿಕೊಳ್ಳಲು ಚೀನಾ ಸರ್ಕಾರಿ ಮಾಧ್ಯಮಗಳು ಸುಳ್ಳು ಸುದ್ದಿಯ ಮೊರೆ ಹೋಗಿವೆ.
ಚೀನಾದ ಮುಖವಾಣಿ ‘ಗ್ಲೋಬಲ್ ಟೈಮ್ಸ್’, ಈ ಸಿನಿಮಾ ಸತ್ಯವನ್ನು ತಿರುಚುತ್ತಿದೆ ಎಂದು ಕಿರುಚಾಡುತ್ತಿದೆ. ಆದರೆ ವಾಸ್ತವದಲ್ಲಿ, ಅಂದು ಅಪ್ರಚೋದಿತ ದಾಳಿ ನಡೆಸಿ, ಬೆನ್ನಿಗೆ ಚೂರಿ ಹಾಕಲು ಬಂದಿದ್ದ ಚೀನಾ ಸೈನಿಕರಿಗೆ ಭಾರತೀಯ ವೀರ ಯೋಧರು ಸರಿಯಾದ ಪಾಠ ಕಲಿಸಿದ್ದರು. ಈ ಐತಿಹಾಸಿಕ ಸತ್ಯವನ್ನು ಜಗತ್ತಿಗೆ ತೋರಿಸುವ ಸಿನಿಮಾದ ಬಗ್ಗೆ ಚೀನಾ ಅಸಹನೆ ವ್ಯಕ್ತಪಡಿಸಿರುವುದು ಅದರ ಹೇಡಿತನಕ್ಕೆ ಸಾಕ್ಷಿ.

ಗಲ್ವಾನ್ ಸಂಘರ್ಷದಲ್ಲಿ ಅಪ್ರತಿಮ ಸಾಹಸ ಮೆರೆದು ವೀರಮರಣ ಅಪ್ಪಿದ ಕರ್ನಲ್ ಬಿಕ್ಕುಮಲ್ಲ ಸಂತೋಷ್ ಬಾಬು ಅವರ ಶೌರ್ಯವನ್ನು ಚೀನಾ ಹೀಯಾಳಿಸಿರುವುದು ಭಾರತೀಯರನ್ನು ಕೆರಳಿಸಿದೆ. ಚೀನಾದ ಮಾಧ್ಯಮಗಳು ಅವರ ಬಲಿದಾನವನ್ನು ‘ಅತಿರಂಜಿತ’ ಎಂದು ಕರೆದಿರುವುದು ಆ ದೇಶದ ವಿಕೃತ ಮನಸ್ಥಿತಿಯನ್ನು ತೋರಿಸುತ್ತದೆ. ತನ್ನ ದೇಶದ ಸೈನಿಕರ ಸಾವಿನ ಸಂಖ್ಯೆಯನ್ನು ತಿಂಗಳುಗಟ್ಟಲೆ ಮುಚ್ಚಿಟ್ಟಿದ್ದ ಚೀನಾಗೆ, ಭಾರತೀಯ ಸೈನಿಕರ ನೈಜ ಶೌರ್ಯವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಚೀನಾದ ‘ಸುಳ್ಳಿನ ಕೋಟೆ’ಗೆ ಸಿನಿಮಾದ ಪೆಟ್ಟು
ಸಂಘರ್ಷ ನಡೆದ ಸಮಯದಲ್ಲಿ ಚೀನಾ ಕೇವಲ ನಾಲ್ವರು ಸೈನಿಕರು ಮೃತಪಟ್ಟಿದ್ದಾರೆ ಎಂದು ಸುಳ್ಳು ಹೇಳಿತ್ತು. ಆದರೆ ಅಂತರಾಷ್ಟ್ರೀಯ ವರದಿಗಳು ಚೀನಾದ 40ಕ್ಕೂ ಹೆಚ್ಚು ಸೈನಿಕರು ಬಲಿಯಾಗಿದ್ದಾರೆ ಎಂದು ಸಾಕ್ಷಿ ಸಮೇತ ವಿವರಿಸಿದ್ದವು. ಈಗ ಅದೇ ಸುಳ್ಳನ್ನು ಸತ್ಯ ಮಾಡಲು ಹೊರಟಿರುವ ‘ಗ್ಲೋಬಲ್ ಟೈಮ್ಸ್’, ಭಾರತವು ಈ ಸಿನಿಮಾದ ಮೂಲಕ ರಾಷ್ಟ್ರೀಯತೆಯನ್ನು ಪ್ರಚೋದಿಸುತ್ತಿದೆ ಎಂದು ಬೊಬ್ಬೆ ಹೊಡೆಯುತ್ತಿದೆ. ಅಪ್ಪೂರ್ವ ಲಖಿಯಾ ನಿರ್ದೇಶನದ ಈ ಸಿನಿಮಾ ಚೀನಾದ ಅತಿಕ್ರಮಣಕಾರಿ ನೀತಿಯನ್ನು ಜಗತ್ತಿನ ಮುಂದೆ ಅನಾವರಣಗೊಳಿಸಲಿದೆ ಎಂಬ ಭಯ ಡ್ರ್ಯಾಗನ್ ರಾಷ್ಟ್ರವನ್ನು ಕಾಡುತ್ತಿದೆ.
ಸಿನಿಮಾದ ಮೂಲಕ ವೀರರಿಗೆ ನಮನ
ಸಲ್ಮಾನ್ ಖಾನ್ ಮತ್ತು ಚಿತ್ರಾಂಗದಾ ಸಿಂಗ್ ನಟನೆಯ ಈ ಸಿನಿಮಾ, ಕೇವಲ ಚಿತ್ರವಲ್ಲ; ಇದು ಭಾರತ ಮಾತೆಯ ರಕ್ಷಣೆಗಾಗಿ ಪ್ರಾಣತೆತ್ತ 20 ವೀರ ಯೋಧರಿಗೆ ಸಲ್ಲಿಸುವ ಗೌರವವಾಗಿದೆ. ಚೀನಾ ಎಷ್ಟೇ ಅಪಪ್ರಚಾರ ನಡೆಸಿದರೂ, ಗಲ್ವಾನ್ ಕಣಿವೆಯಲ್ಲಿ ಭಾರತೀಯ ಸೇನೆ ತೋರಿದ ಕೆಚ್ಚೆದೆಯ ಹೋರಾಟದ ಇತಿಹಾಸವನ್ನು ಅಳಿಸಲು ಸಾಧ್ಯವಿಲ್ಲ ಎಂಬುದಕ್ಕೆ ಈ ಸಿನಿಮಾದ ಟೀಸರ್ ಗೆ ಸಿಗುತ್ತಿರುವ ಬೆಂಬಲವೇ ಸಾಕ್ಷಿ.
ಇದನ್ನೂ ಓದಿ: ಮುಂಬೈ | ಪಾದಚಾರಿಗಳ ಮೇಲೆ ಹರಿದ ಬಸ್ ; ನಾಲ್ವರು ಸಾವು, ಹಲವರಿಗೆ ಗಾಯ..!



















