ನವದೆಹಲಿ: ಭಾರತ ಮತ್ತು ಚೀನಾ ನಡುವಿನ ರಾಜತಾಂತ್ರಿಕ ಸಂಬಂಧದಲ್ಲಿ ಮಹತ್ವದ ಬೆಳವಣಿಗೆಯೆಂಬಂತೆ, 2020ರ ಗಾಲ್ವಾನ್ ಕಣಿವೆ ಸಂಘರ್ಷದ ನಂತರ ಇದೇ ಮೊದಲ ಬಾರಿಗೆ ಚೀನಾ ಕಮ್ಯುನಿಸ್ಟ್ ಪಕ್ಷದ (ಸಿಪಿಸಿ) ನಿಯೋಗವೊಂದು ದೆಹಲಿಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಗೆ ಸೋಮವಾರ ಭೇಟಿ ನೀಡಿ ಉನ್ನತ ಮಟ್ಟದ ಮಾತುಕತೆ ನಡೆಸಿದೆ.
ಗಡಿ ಸಂಘರ್ಷದಿಂದಾಗಿ ಹದಗೆಟ್ಟಿದ್ದ ಉಭಯ ದೇಶಗಳ ಬಾಂಧವ್ಯ ಸುಧಾರಣೆಯತ್ತ ಸಾಗುತ್ತಿದೆ ಎನ್ನುವುದಕ್ಕೆ ಈ ಭೇಟಿ ಸಾಕ್ಷಿಯಾಗಿದೆ. ದಶಕಗಳ ಬಳಿಕ ಎರಡೂ ಆಡಳಿತಾರೂಢ ಪಕ್ಷಗಳ ನಡುವೆ ನಡೆದ ಈ ನೇರ ಸಂವಾದ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಚೀನಾ ಕಮ್ಯುನಿಸ್ಟ್ ಪಕ್ಷದ ಅಂತರರಾಷ್ಟ್ರೀಯ ವಿಭಾಗದ (ಐಡಿಸಿಪಿಸಿ) ಉಪ ಸಚಿವೆ ಸನ್ ಹೈಯಾನ್ ನೇತೃತ್ವದ ನಿಯೋಗವು ಬಿಜೆಪಿ ಕಚೇರಿಗೆ ಆಗಮಿಸಿದೆ. ಈ ನಿಯೋಗದೊಂದಿಗೆ ಚೀನಾದ ಭಾರತದ ರಾಯಭಾರಿ ಕ್ಸು ಫೀಹಾಂಗ್ ಕೂಡ ಉಪಸ್ಥಿತರಿದ್ದರು. ಬಿಜೆಪಿ ಕಡೆಯಿಂದ ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಮತ್ತು ವಿದೇಶಾಂಗ ವ್ಯವಹಾರಗಳ ವಿಭಾಗದ ಉಸ್ತುವಾರಿ ವಿಜಯ್ ಚೌಥೈವಾಲೆ ಅವರು ಚೀನಾ ನಿಯೋಗವನ್ನು ಬರಮಾಡಿಕೊಂಡರು.
ಸಭೆಯ ಕುರಿತು ಮಾಹಿತಿ ನೀಡಿರುವ ವಿಜಯ್ ಚೌಥೈವಾಲೆ, “ಬಿಜೆಪಿ ಮತ್ತು ಚೀನಾ ಕಮ್ಯುನಿಸ್ಟ್ ಪಕ್ಷದ ನಡುವಿನ ಅಂತರ್-ಪಕ್ಷೀಯ ಸಂವಹನವನ್ನು ಹೇಗೆ ಮುಂದುವರಿಸಬೇಕು ಮತ್ತು ಮಾತುಕತೆಯನ್ನು ಹೆಚ್ಚಿಸುವುದು ಹೇಗೆ ಎಂಬ ವಿಷಯಗಳ ಕುರಿತು ಚರ್ಚಿಸಲಾಯಿತು,” ಎಂದು ತಿಳಿಸಿದ್ದಾರೆ. ಅರುಣ್ ಸಿಂಗ್ ಅವರು ಕೂಡ ಸಾಮಾಜಿಕ ಜಾಲತಾಣದಲ್ಲಿ ಈ ಭೇಟಿಯ ಮಹತ್ವವನ್ನು ಹಂಚಿಕೊಂಡಿದ್ದು, ಉಭಯ ಪಕ್ಷಗಳ ನಡುವಿನ ಸಂವಹನ ವೃದ್ಧಿಯ ಬಗ್ಗೆ ಚರ್ಚೆ ನಡೆದಿದೆ ಎಂದಿದ್ದಾರೆ.
ರಾಜತಾಂತ್ರಿಕ ಹಿನ್ನೆಲೆ
ಐತಿಹಾಸಿಕವಾಗಿ, ಬಿಜೆಪಿ ಮತ್ತು ಸಿಪಿಸಿ 2000ರ ದಶಕದ ಅಂತ್ಯದಿಂದಲೂ ನಂಟು ಕಾಯ್ದುಕೊಂಡಿದ್ದವು. ಹಲವು ಬಿಜೆಪಿ ನಿಯೋಗಗಳು ಬೀಜಿಂಗ್‌ಗೆ ಭೇಟಿ ನೀಡಿದ್ದವು. ಆದರೆ, 2020ರಲ್ಲಿ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ನಡೆದ ರಕ್ತಸಿಕ್ತ ಸಂಘರ್ಷದ ನಂತರ ಈ ಸಂಬಂಧ ಸಂಪೂರ್ಣವಾಗಿ ಕಡಿದುಹೋಗಿತ್ತು. ಎಲ್‌ಎಸಿಯಲ್ಲಿನ ಉದ್ವಿಗ್ನತೆ ಭಾರತ-ಚೀನಾ ಸಂಬಂಧವನ್ನು ಅಧಃಪತನಕ್ಕೆ ತಳ್ಳಿದ್ದವು.
ಆದರೆ, 2024ರ ಅಕ್ಟೋಬರ್‌ನಲ್ಲಿ ರಷ್ಯಾದ ಕಜಾನ್‌ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯ ನೇಪಥ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭೇಟಿಯಾಗಿದ್ದರು. ಐದು ವರ್ಷಗಳ ನಂತರ ನಡೆದ ಈ ದ್ವಿಪಕ್ಷೀಯ ಮಾತುಕತೆಯು ಗಡಿ ಭಾಗದಲ್ಲಿ ಸೇನಾಪಡೆಗಳ ಹಿಂತೆಗೆತ ಮತ್ತು ರಾಜತಾಂತ್ರಿಕ ಮಾತುಕತೆಗಳ ಪುನರಾರಂಭಕ್ಕೆ ನಾಂದಿ ಹಾಡಿತ್ತು. ಈಗಿನ ಬಿಜೆಪಿ-ಸಿಪಿಸಿ ಭೇಟಿಯು ಆ ಪ್ರಕ್ರಿಯೆಯ ಮುಂದುವರಿದ ಭಾಗ ಎಂದು ವಿಶ್ಲೇಷಿಸಲಾಗುತ್ತಿದೆ.
ಕಾಂಗ್ರೆಸ್-ಬಿಜೆಪಿ ಆರೋಪ-ಪ್ರತ್ಯಾರೋಪಗಳ ನಡುವೆ ನಡೆದ ಭೇಟಿ
ವಿಶೇಷವೆಂದರೆ, ಈ ಹಿಂದೆ ಚೀನಾ ಜೊತೆಗಿನ ಸಂಬಂಧದ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಪರಸ್ಪರ ತೀವ್ರ ವಾಗ್ದಾಳಿ ನಡೆಸಿದ್ದವು. 2018ರಲ್ಲಿ ರಾಹುಲ್ ಗಾಂಧಿ ಅವರು ಬೀಜಿಂಗ್‌ಗೆ ಭೇಟಿ ನೀಡಿದ್ದಾಗ ಚೀನಾ ಕಮ್ಯುನಿಸ್ಟ್ ಪಕ್ಷದೊಂದಿಗೆ “ರಹಸ್ಯ ಒಪ್ಪಂದ” (ಎಂಒಯು) ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿತ್ತು. ಅಲ್ಲದೆ, 2017ರ ಡೋಕ್ಲಾಮ್ ಬಿಕ್ಕಟ್ಟಿನ ಸಂದರ್ಭದಲ್ಲಿ ರಾಹುಲ್ ಗಾಂಧಿ ಚೀನಾ ರಾಯಭಾರಿಯನ್ನು ಭೇಟಿಯಾಗಿದ್ದರು ಎಂದೂ ಬಿಜೆಪಿ ಟೀಕಿಸಿತ್ತು.
ಮತ್ತೊಂದೆಡೆ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಾ ಬಂದಿದ್ದಾರೆ. “ಗಾಲ್ವಾನ್ ಸಂಘರ್ಷದ ನಂತರ ಚೀನಾಕ್ಕೆ ತಕ್ಕ ಉತ್ತರ ನೀಡಲು ಮೋದಿ ವಿಫಲರಾಗಿದ್ದಾರೆ ಮತ್ತು ಚೀನಾದ ಆಕ್ರಮಣಕಾರಿ ಧೋರಣೆಗೆ ಹೆದರುತ್ತಿದ್ದಾರೆ,” ಎಂದು ಕಾಂಗ್ರೆಸ್ ಟೀಕಿಸಿತ್ತು. ಹೀಗಿರುವಾಗ, ಈಗ ಸ್ವತಃ ಆಡಳಿತಾರೂಢ ಬಿಜೆಪಿಯೇ ಚೀನಾ ಕಮ್ಯುನಿಸ್ಟ್ ಪಕ್ಷದ ನಿಯೋಗವನ್ನು ಸ್ವಾಗತಿಸಿ ಮಾತುಕತೆ ನಡೆಸಿರುವುದು ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ.
ಇದನ್ನೂ ಓದಿ: ಬಾಂಗ್ಲಾದಲ್ಲಿ ಹಿಂದೂ ಆಟೋ ಚಾಲಕನ ಭೀಕರ ಹತ್ಯೆ | 42 ದಿನಗಳಲ್ಲಿ 12ನೇ ಬಲಿ!



















