ವಾಷಿಂಗ್ಟನ್ : ಇತ್ತೀಚಿಗೆ ಚೀನಾದ ಟಿಯಾಂಜಿನ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ ಶೃಂಗಸಭೆಯಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾದ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಒಟ್ಟಿಗೆ ಕಾಣಿಸಿಕೊಂಡ ನಂತರ ಭಾರತ ಮತ್ತು ಅಮೆರಿಕ ನಡುವಿನ ಬಾಂಧವ್ಯ ಹಾಗೂ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಮತ್ತಷ್ಟು ಜಟಿಲಗೊಂಡಿದೆ. ಈ ನಡುವೆ ಟ್ರಂಪ್ ಇಂದು (ಶುಕ್ರವಾರ,ಸೆ.05) ತಮ್ಮ ಅಧಿಕೃತ ಟ್ರುಥ್ ಖಾತೆಯಲ್ಲಿ ಮಾಡಿರುವ ಫೋಸ್ಟ್ ಜಗತ್ತಿನ ಗಮನ ಸೆಳೆದಿದೆ.
“ನಾವು ಭಾರತ ಮತ್ತು ರಷ್ಯಾವನ್ನು ಅತ್ಯಂತ ಕರಾಳ ಚೀನಾಕ್ಕೆ ಕಳೆದುಕೊಂಡಂತೆ ಕಾಣುತ್ತಿದೆ. ಅವರು ಒಟ್ಟಿಗೆ ದೀರ್ಘ ಮತ್ತು ಸಮೃದ್ಧ ಭವಿಷ್ಯವನ್ನು ಹೊಂದಿರಲಿ! ಎಂದು ಟ್ರಂಪ್ ತಮ್ಮ ಟ್ರುಥ್ ಸೋಶಿಯಲ್ ಪೋಸ್ಟ್‌ಗೆ ಶೀರ್ಷಿಕೆ ನೀಡಿ, ಅದರೊಂದಿಗೆ ಟಿಯಾಂಜಿನ್ ಸಭೆಯಲ್ಲಿ ಪುಟಿನ್ ಮತ್ತು ಜಿನ್‌ಪಿಂಗ್ ಅವರೊಂದಿಗೆ ಪ್ರಧಾನಿ ಮೋದಿ ಕಾಣಿಸಿಕೊಂಡಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಕಳೆದ ತಿಂಗಳು ಭಾರತದ ಮೇಲೆ ಟ್ರಂಪ್ ಒಟ್ಟಾರೇ ಶೇ.50 ರಷ್ಟು ಸುಂಕ ವಿಧಿಸಿದ ನಂತರ ಭಾರತ-ಅಮೆರಿಕ ನಡುವಿನ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿದೆ. ರಷ್ಯಾದಿಂದ ತೈಲವನ್ನು ಖರೀದಿ ಹಿನ್ನೆಲೆಯಲ್ಲಿ ಭಾರತದ ಮೇಲೆ ಅಮೆರಿಕ ಶೇ.25 ರಷ್ಟು ಮೂಲ ಸುಂಕ ಮತ್ತು ಶೇ.25 ರಷ್ಟು ಹೆಚ್ಚುವರಿ ದಂಡವನ್ನು ವಿಧಿಸಿದೆ.
ಇದರ ನಡುವೆ ವಿದೇಶಾಂಗ ವ್ಯವಹಾರಗಳ ಇಲಾಖೆ, ಶುಕ್ರವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ, ಟ್ರಂಪ್ ಅವರ ಪೋಸ್ಟ್‌ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ.