ಬೆಂಗಳೂರು: ಛಲವಾದಿ ನಾರಾಯಣಸ್ವಾಮಿ ಕರ್ನಾಟಕದ ಅಪ್ರಬುದ್ಧ ವಿರೋಧ ಪಕ್ಷದ ನಾಯಕ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಛಲವಾದಿ ನಾರಾಯಣಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಗ್ ಬಾಸ್ ವಿಷಯದಲ್ಲಿ ಸರ್ಕಾರ ಸುದೀಪ್‌ರನ್ನು ಟಾರ್ಗೆಟ್ ಮಾಡಿದ್ದಾರೆ ಎಂಬ ಛಲವಾದಿ ನಾರಾಯಣಸ್ವಾಮಿ ಆರೋಪಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಪ್ರದೀಪ್ ಈಶ್ವರ್, ಕರ್ನಾಟಕದಲ್ಲಿ ಅಪ್ರಬುದ್ಧ ವಿರೋಧ ಪಕ್ಷದ ನಾಯಕ ಎಂದರೆ ಅದು ಛಲವಾದಿ ನಾರಾಯಣಸ್ವಾಮಿ. ಸರ್ಕಾರ ಸುದೀಪ್ ಅವರನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಮಾತನಾಡುತ್ತಾರೆ. ನಾವು ಯಾಕೆ ಅವರನ್ನ ಟಾರ್ಗೆಟ್ ಮಾಡೋಣ. ಸುದೀಪ್ ಸರ್ ಎಂದರೆ ನಮಗೆ ಬಿಜೆಪಿ ಅವರಿಗಿಂತ ಹೆಚ್ಚು ಗೌರವ, ಪ್ರೀತಿ. ಬಿಗ್ ಬಾಸ್ ವಿಚಾರ ಕಮ್ಯುನಿಕೇಶನ್ ಸಮಸ್ಯೆಯಿಂದ ಆಗಿತ್ತು. ಈಗ ಡಿಕೆ ಸಾಹೇಬ್ರು ಸರಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಬಿಜೆಪಿ ಅವರು ಲಿಂಗಾಯತರನ್ನು ಟಾರ್ಗೆಟ್ ಮಾಡಿದ್ದಾರೆ. ಹಿಂದುಳಿದ, ದಲಿತರನ್ನು ಬಿಜೆಪಿ ಟಾರ್ಗೆಟ್ ಮಾಡಿದೆ. ಛಲವಾದಿ ಅವರೇ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಇಳಿಸಿದ್ದಾಗ ಎಲ್ಲಿ ಹೋಗಿದ್ದರು. ಛಲವಾದಿ ಅವರು ಬಾಯಿ ತೆಗೆದರೆ ಏನೇನೋ ಮಾತನಾಡುತ್ತಾರೆ ಎಂದು ಕಿಡಿಕಾರಿದ್ದಾರೆ.
ಬಿಗ್ ಬಾಸ್ ವಿಷಯ ನಮ್ಮ ಸರ್ಕಾರದ ಗಮನಕ್ಕೆ ಬಂದ ಕೂಡಲೇ ಡಿಸಿಎಂ ಸಾಹೇಬ್ರು ಸರಿ ಮಾಡಿದ್ದಾರೆ. ಕಾನೂನು ಯಾರಪ್ಪನಿಗಾದರು ಒಂದೇ. ಕನ್ನಡ ಚಿತ್ರರಂಗದ ಪರವಾಗಿ ನಮ್ಮ ಸರ್ಕಾರ ಇದೆ. ಛಲವಾದಿ ಅವರೇ ಬಾಯಿಗೆ ಬಂದ ಹಾಗೇ ಮಾತಾಡಬೇಡಿ. ಕನ್ನಡ ಚಿತ್ರರಂಗದ ಬಗ್ಗೆ ನಮ್ಮ ಸರ್ಕಾರಕ್ಕೆ ಗೌರವ ಇದೆ. ಛಲವಾದಿ ನಾರಾಯಣಸ್ವಾಮಿ ರಾಜಕೀಯವನ್ನು ರಾಜಕೀಯವಾಗಿ ಮಾಡಿ. ಸುದೀಪ್ ಸರ್ ಅವರೇ ಡಿಸಿಎಂಗೆ ಧನ್ಯವಾದ ಹೇಳಿದ್ದಾರೆ. ಛಲವಾದಿ ಅವರಿಗೆ ಐಡೆಂಟಿಟಿ ಕಾಡುತ್ತಿದೆ, ಅದಕ್ಕೆ ಹೀಗೆ ಮಾತನಾಡುತ್ತಿದ್ದಾರೆ. ನಮ್ಮ ಗಮನಕ್ಕೆ ಈ ವಿಷಯ ಇರಲಿಲ್ಲ. ಒಂದು ದಿನ ಆದ ಮೇಲೆ ಗಮನಕ್ಕೆ ಬಂದಿದೆ ಆದರೂ ಸರಿ ಮಾಡಿದ್ದೇವೆ ಎಂದು ಹೇಳಿದ್ದಾರೆ.