ಬೆಂಗಳೂರು: ನಾವು ಯಾರಿಗಾದರೂ ನೀಡಿದ ಚೆಕ್ ಬೌನ್ಸ್ ಆದರೆ, ಚೆಕ್ ಪಡೆದವರು ನಮ್ಮ ವಿರುದ್ಧ ಕೇಸ್ ದಾಖಲಿಸಿದರೆ ನಮಗೆ ಜೈಲು ಶಿಕ್ಷೆ ಗ್ಯಾರಂಟಿ ಎಂದೇ ಲೆಕ್ಕ. ಆದರೆ, ಕೆಲವು ಪ್ರಕರಣಗಳಲ್ಲಿ ಚೆಕ್ ಬೌನ್ಸ್ ಪ್ರಕರಣ ಸಾಬೀತಾದರೂ ಅಪರಾಧಿ ಎನಿಸಿಕೊಂಡವರು ಜೈಲು ಶಿಕ್ಷೆಯಿಂದ ಪಾರಾಗಬಹುದು ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಮಹತ್ವದ ತೀರ್ಪು ನೀಡಿದೆ.
ಹೌದು, ನೆಗೋಷಿಯೇಬಲ್ ಇನ್ ಸ್ಟ್ರುಮೆಂಟ್ಸ್ ಆ್ಯಕ್ಟ್ (ಎನ್ ಐ ಆ್ಯಕ್ಟ್) ನ ಸೆಕ್ಷನ್ 138 ರ ಅಡಿಯಲ್ಲಿ ಚೆಕ್ ಬೌನ್ಸ್ ಅಪರಾಧವು ಪ್ರಾಥಮಿಕವಾಗಿ ನಾಗರಿಕ ಅಪರಾಧವಾಗಿದೆ.ವಿಶೇಷ ಕಾರಣಗಳಿಗಾಗಿ ಇದನ್ನು ಕ್ರಿಮಿನಲ್ ಪ್ರಕರಣವನ್ನಾಗಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿತು. ಚೆಕ್ ಪಡೆದವರು ಹಾಗೂ ಚೆಕ್ ನೀಡಿದವರು ಒಪ್ಪಂದ ಮಾಡಿಕೊಂಡರೆ, ಅಪರಾಧಿಯು ಜೈಲು ಶಿಕ್ಷೆಯಿಂದ ಪಾರಾಗಬಹುದು ಎಂದು ಸುಪ್ರೀಂ ಕೊರ್ಟ್ ತಿಳಿಸಿದೆ.
ಚೆಕ್ ಬೌನ್ಸ್ ಪ್ರಕರಣದಲ್ಲಿ, ಎರಡೂ ಪಕ್ಷಗಳ ನಡುವಿನ ವ್ಯಾಜ್ಯವು ಮಾತುಕತೆ ಮೂಲಕ ಇತ್ಯರ್ಥವಾದಾಗ ಮತ್ತು ಲಿಖಿತ ಒಪ್ಪಂದಕ್ಕೆ ಸಹಿ ಹಾಕಿದಾಗ, ಅಪರಾಧಿಗೆ ನೀಡಲಾದ ಶಿಕ್ಷೆಯನ್ನು ಉಳಿಸಿಕೊಳ್ಳಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ದೂರುದಾರನು ತಾನು ಬಾಕಿ ಮೊತ್ತವನ್ನು ಪಡೆದಿದ್ದೇನೆ ಎಂದು ಒಪ್ಪಿಕೊಂಡರೆ, ಸೆಕ್ಷನ್ 138 ರ ಅಡಿಯಲ್ಲಿ ವಿಚಾರಣೆಯನ್ನು ಮುಂದುವರಿಸಲಾಗುವುದಿಲ್ಲ ಎಂದು ಕೋರ್ಟ್ ತಿಳಿಸಿದೆ.
ಚೆಕ್ ಬೌನ್ಸ್ ಪ್ರಕರಣವನ್ನು ಸುಪ್ರೀಂ ಕೋರ್ಟ್ ವೈಯಕ್ತಿಕ ವಿವಾದ ಎಂದು ತಿಳಿಸಿದೆ. ನೆಗೋಷಿಯೇಬಲ್ ಇನ್ ಸ್ಟ್ರುಮೆಂಟ್ಸ್ ಕಾಯ್ದೆಯ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳಲು, ಇದನ್ನು ಕ್ರಿಮಿನಲ್ ಅಪರಾಧಗಳ ವರ್ಗದಲ್ಲಿ ಇರಿಸಲಾಗಿದೆ. ಹಾಗಾಗಿ, ಜೈಲು ಶಿಕ್ಷೆಯು ಕಡ್ಡಾಯವಲ್ಲ. ಆದರೆ, ಇದಕ್ಕೆ ಎದುರಾಳಿ ಪಕ್ಷದವರು ಒಪ್ಪಿಗೆ ಸೂಚಿಸಬೇಕು ಎಂದು ಹೇಳಿದೆ.