ಚೆನ್ನೈ: ಐಪಿಎಲ್ 18ನೇ ಆವೃತ್ತಿಯ 3ನೇ ಪಂದ್ಯದಲ್ಲಿ ಮುಂಬೈ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೆದ್ದು ಬೀಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿದ ಮುಂಬೈ ಇಂಡಿಯನ್ಸ್ ತಂಡ ಆರಂಭದಿಂದಲೂ ವಿಕೆಟ್ ಕಳೆದುಕೊಳ್ಳುತ್ತ ಸಾಗಿತು. ಹೀಗಾಗಿ ರನ್ ವೇಗ ಸಿಗಲಿಲ್ಲ. ಪರಿಣಾಮ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 155 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ಚೆನ್ನೈ ತಂಡ 19.1 ಓವರ್ ಗಳಲ್ಲಿ 158 ರನ್ ಗಳಿಸುವುದರ ಮೂಲಕ 4 ವಿಕೆಟ್ ಜಯ ಗಳಿಸಿತು.
ಚೆನ್ನೈ ಪರ ಋತುರಾಜ್ ಗಾಯಕ್ವಾಡ್, ರಚಿನ್ ರವೀಂದ್ರ ಅರ್ಧ ಶತಕ ಹಾಗೂ ನೂರ್ ಅಹ್ಮದ್ ಉತ್ತಮ ಬೌಲಿಂಗ್ ನಿಂದಾಗಿ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 4 ವಿಕೆಟ್‌ಗಳ ರೋಚಕ ಜಯ ಸಾಧಿಸಿತು.
ಸಾಂಪ್ರದಾಯಿಕ ಎದುರಾಳಿಗಳಾದ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಕಾದಾಟದಲ್ಲಿ ಈ ಬಾರಿ ಚೆನ್ನೈ ಮೇಲುಗೈ ಸಾಧಿಸಿದೆ. ಮುಂಬೈ ಇಂಡಿಯನ್ಸ್ ಪರ ರೋಹಿತ್ ಶರ್ಮಾ ಮತ್ತು ರಯಾನ್ ರಿಕಲ್ಟನ್ ಇನ್ನಿಂಗ್ಸ್ ಆರಂಭಿಸಿದರು. ರೋಹಿತ್ ಶರ್ಮಾ ಶೂನ್ಯಕ್ಕೆ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದರು. ರಿಕಲ್ಟನ್ 13 ರನ್‌ಗಳಿಗೆ ವಿಕೆಟ್ ಕಳೆದುಕೊಂಡರು.
ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ತಂಡಕ್ಕೆ ಆಸರೆಯಾದರು. ಮುಂಬೈ ಇಂಡಿಯನ್ಸ್ ಪರ ತಿಲಕ್ ವರ್ಮಾ 31 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ನಾಯಕ ಸೂರ್ಯಕುಮಾರ್ ಕೂಡ 29 ರನ್ ಗಳಿಸಿದರು. ಆದರೆ, ಇನ್ನುಳಿದ ಆಟಗಾರರು ಸಿಎಸ್‌ಕೆ ಬೌಲಿಂಗ್ ದಾಳಿಯನ್ನು ಎದುರಿಸುವಲ್ಲಿ ಯಶಸ್ವಿಯಾಗಲಿಲ್ಲ. ಚೆನ್ನೈ ಪರ ನೂರ್ ಅಹ್ಮದ್ 4 ವಿಕೆಟ್ ಕಬಳಿಸಿದರು. ಖಲೀಲ್ ಅಹ್ಮದ್ 3 ವಿಕೆಟ್ ಪಡೆದರು. ನಾಥನ್ ಎಲ್ಲಿಸ್ ಮತ್ತು ರವಿಚಂದ್ರನ್ ಅಶ್ವಿನ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.