ಮಂಡ್ಯ : ಮಂಡ್ಯ ಜಿಲ್ಲೆಯ ಬಸರಾಳು ಗ್ರಾಮದಲ್ಲಿರುವ ಕೆಮಿಕಲ್ ಫ್ಯಾಕ್ಟರಿಯ ಟ್ಯಾಂಕ್ ಸ್ಫೋಟಗೊಂಡಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಘಟನೆ ಸ್ಥಳಕ್ಕೆ ಶಾಸಕ ಗಣಿಗ ರವಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಗ್ರಾಮಸ್ಥರೊಂದಿಗೆ ಮಾತನಾಡಿ ಮಾಹಿತಿ ಪಡೆದರು.
ಈ ಹಿಂದೆ ಕೂಡ ಫ್ಯಾಕ್ಟರಿಯಿಂದ ಕೆಮಿಕಲ್ ಸೋರಿಕೆ ಸಂಭವಿಸಿ ರೈತರ ಜಮೀನಿಗೆ ಹರಿದು ಹೋಗಿದ್ದ ಹಿನ್ನೆಲೆ ಇದೆ. ಆ ವೇಳೆ ಕೆಲವು ಗ್ರಾಮಸ್ಥರು ಅಸ್ವಸ್ಥರಾಗಿದ್ದರು. ಫ್ಯಾಕ್ಟರಿಯ ವಿರುದ್ಧ ರೈತರು ಹೋರಾಟ ನಡೆಸಿದ್ದು, ಅದಕ್ಕೆ ತಾನು ಸಹ ಬೆಂಬಲ ನೀಡಿದ್ದಾಗಿ ಶಾಸಕ ಗಣಿಗ ರವಿಕುಮಾರ್ ತಿಳಿಸಿದ್ದಾರೆ. ಹೋರಾಟದ ಬಳಿಕ ಫ್ಯಾಕ್ಟರಿ ಮುಚ್ಚಲಾಗಿತ್ತು. ಆದರೆ ಮಾಲೀಕರು ಕೋರ್ಟ್‌ಗೆ ತೆರಳಿ ಆದೇಶ ಪಡೆದುಕೊಂಡಿದ್ದರು ಎನ್ನಲಾಗಿದೆ.
ಇತ್ತೀಚೆಗೆ ಕೋರ್ಟ್ ಆದೇಶದ ಹಿನ್ನೆಲೆ ಫ್ಯಾಕ್ಟರಿಯ ಸಲಕರಣೆಗಳನ್ನು ಬಿಚ್ಚಿ ಕೊಂಡೊಯ್ಯುವ ಕಾರ್ಯ ನಡೆಯುತ್ತಿದ್ದ ವೇಳೆ ಟ್ಯಾಂಕ್ ಸ್ಫೋಟ ಸಂಭವಿಸಿದೆ ಎಂದು ತಿಳಿದುಬಂದಿದೆ.
ಈ ದುರ್ಘಟನೆಯಲ್ಲಿ ಉತ್ತರ ಪ್ರದೇಶ ಮೂಲದ ಆಕಾಶ್ ಮತ್ತು ಅಲ್ಲುಕಾನ್ ಮೃತಪಟ್ಟಿದ್ದಾರೆ. ಗಾಯಗೊಂಡವರನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ತನಿಖೆ ನಡೆಸಿ ವರದಿ ಸಲ್ಲಿಸಲಿದ್ದಾರೆ. ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ತಿಳಿಸಿದ್ದಾರೆ. ಮಾಲೀಕರ ನಿರ್ಲಕ್ಷ್ಯ ಸ್ಪಷ್ಟವಾಗಿ ಗೋಚರಿಸುತ್ತಿದ್ದು, ತಪ್ಪಿತಸ್ಥರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಮೃತ ಯುವಕರ ವಿಳಾಸ ಪತ್ತೆ ಹಚ್ಚುವ ಕಾರ್ಯ ಮುಂದುವರಿದಿದ್ದು, ಅವರ ಮೃತದೇಹಗಳನ್ನು ಸ್ವಗ್ರಾಮಗಳಿಗೆ ರವಾನೆ ಮಾಡುವ ವ್ಯವಸ್ಥೆ ಮಾಡಲಾಗುತ್ತಿದೆ.
ಇದನ್ನೂ ಓದಿ : ಉಡುಪಿ | ಕಾಂಗ್ರೆಸ್ ಯುವ ಮುಖಂಡನ ಮೇಲೆ ಹಲ್ಲೆ ಪ್ರಕರಣ ; ತಲ್ವಾರ್ ಜಳಪಿಸಿದ್ದ ಐವರು ಪುಂಡರ ಬಂಧನ..!



















