ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರೈತರ ಬದುಕು ತೊಯ್ದು ತೊಪ್ಪೆಯಾಗಿದೆ. ಅಲ್ಲದೇ, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಮಳೆಗೆ ರೈತರ ಬೆಳೆಯಲ್ಲ ಆಹುತಿಯಾಗಿದ್ದು, ತರಕಾರಿ ಬೆಲೆ ಕೂಡ ಇಳಿಕೆ ಕಂಡಿದೆ.
ರಾಜ್ಯದಲ್ಲಿ ಈ ಬಾರಿಯ ಮುಂಗಾರು ವಾಡಿಕೆಗಿಂತಲೂ ಹೆಚ್ಚು ಸುರಿದಿದೆ. ಪರಿಣಾಮವಾಗಿ ಹವಾಮಾನ ವ್ಯತಿರಿಕ್ತವಾಗಿ ಬೆಳೆದ ಬೆಳೆಯಲ್ಲ ಕೊಳೆಯುತ್ತಿವೆ. ಶ್ರಾವಣ ಮುಗಿದ ನಂತರ ತರಕಾರಿಗಳ ಬೇಡಿಕೆ ಕೂಡ ಕುಸಿದಿದೆ. ಅಲ್ಲದೇ, ಗುಣಮಟ್ಟದಲ್ಲೂ ವ್ಯತ್ಯಾಸ ಹೆಚ್ಚಾಗಿದೆ. ಹೀಗಾಗಿ ತರಕಾರಿ ಖರೀದಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. ರೈತರಿಗೆ ನಷ್ಟದ ಭೀತಿ ಎದುರಾಗುತ್ತಿದೆ.
18 ರಿಂದ 22 ಕೆಜಿಯಷ್ಟು ತೂಕ ಇರುವ ಟೊಮೆಟೋ ಚೀಲಗಳಿಗೆ ಈಗ ಕೇವಲ 100 ರೂ.ನಿಂದ 120 ರೂ.ಗೆ ಮಾರಾಟವಾಗುತ್ತಿದೆ. ಹೀಗಾಗಿ ಪ್ರತಿ ಕೆಜಿ 5 ರೂ.ಗೂ ಕಡಿಮೆ ದರದಲ್ಲಿ ಮಾರಟವಾಗುತ್ತಿದೆ. ಇದರಿಂದಾಗಿ ರೈತರು ಕಂಗಲಾಗಿದ್ದಾರೆ. ಮಾಡಿದ ಖರ್ಚು ಕೈಗೆ ಸಿಗುತ್ತಿಲ್ಲ ಎಂದು ಕಣ್ಣೀರು ಸುರಿಸುತ್ತಿದ್ದಾರೆ.
ಮಾರುಕಟ್ಟೆಯಲ್ಲಿ ಟೊಮೆಟೋ ಕೆಜಿಗೆ 5ರೂ., ಬೀನ್ಸ್ 25ರೂ., ಮೂಲಂಗಿ 15 ರೂ.ನಿಂದ 20 ರೂ., ಹೀರೇಕಾಯಿ 15 ರೂ.ನಿಂದ 20ರೂ., ಎಲೆಕೋಸು 8 ರೂ.ನಿಂದ 10ರೂ. ಮಾರಾಟವಾಗುತ್ತಿದೆ. ಹವಾಮಾನ ವೈಪರೀತ್ಯದಿಂದಾಗಿ ಮಾರುಕಟ್ಟೆಗೆ ತರಕಾರಿ ಕಡಿಮೆ ಪ್ರಮಾಣದಲ್ಲಿ ಬರುತ್ತಿದ್ದು, ಬೇಡಿಕೆಯೂ ಕುಸಿಯುತ್ತಿರುವುದು ನಿಜವಾಗಿಯೂ ಆತಂಕವೇ ಸರಿ. ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಿ ರೈತರಿಗೆ ಆಸರೆಯಾಗಬೇಕು ಎಂದು ರೈತ ಸಂಕುಲ ಮನವಿ ಮಾಡುತ್ತಿದೆ.