ಮಹಾಂತಿ ಮಠ ಅಥವಾ ಚಂಪಕ ಸರಸು ಎಂಬ ಹೆಸರಿನಿಂದ ಪ್ರಸಿದ್ಧಿ ಪಡೆದಿರುವ ಈ ಸ್ಥಳ ಪ್ರಕೃತಿಯ ಮಡಿಲಲ್ಲಿರುವ ಸುಂದರ ಪ್ರವಾಸಿ ತಾಣವಾಗಿ ಬೆಳೆದು ನಿಂತಿದೆ. ಇದು ಶಿವಮೊಗ್ಗ ಜಿಲ್ಲೆಯ ಆನಂದಪುರದ ಮಲಂದೂರು ಎಂಬ ಗ್ರಾಮದಲ್ಲಿರುವ ಈ ಸ್ಥಳ ಕೆಲವು ವರ್ಷಗಳಿಂದ ಪ್ರವಾಸಿಗರ ಗಮನಸೆಳೆಯುತ್ತಿದೆ. ಇದರ ಸುತ್ತಲಿನ ಪ್ರದೇಶ ಹಚ್ಚ ಹಸಿರಿಂದ ಕೂಡಿದ್ದು ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ.
“ಚಂಪಕ ಸರಸುವಿನ ಇತಿಹಾಸ”
ಈ ಸ್ಥಳಕ್ಕೆ ಒಂದು ಸುದೀರ್ಘ ಇತಿಹಾಸವಿದೆ. 17ನೇ ಶತಮಾನದಲ್ಲಿ ಕೆಳದಿ ರಾಜ ವೆಂಕಟಪ್ಪ ನಾಯಕನು ನಿರ್ಮಿಸಲ್ಪಟ್ಟ ಈ ಕೊಳದ ಸುತ್ತ ಒಂದು ಪ್ರೇಮ ಕಥೆ ಸುತ್ತುವರೆದಿದೆ. ರಾಜನು ಚಂಪಕ ಎಂಬ ಹುಡುಗಿಯನ್ನು ಪ್ರೀತಿಸಿ ಮದುವೆಯಾಗಿರುತ್ತಾನೆ ಆದರೆ ಅವಳು ಕೆಳ ಜಾತಿಯ ಹುಡುಗಿಯಾಗಿರುವುದರಿಂದ ಸಮಾಜದಲ್ಲಿ ಹಲವಾರು ರೀತಿಯ ಮಾತುಗಳಿಗೆ ನಿಂದನೆಗಳಿಗೆ ಈಡಾದ ಚಂಪಕಳು ಅವಮಾನ ಎದುರಿಸಲಾರದೆ ಕೊನೆಯುಸಿರೆಳೆದಳು. ಆದ್ದರಿಂದ ವೆಂಕಟಪ್ಪ ನಾಯಕ ಅವಳ ನೆನಪಿಗಾಗಿ ಈ ಸುಂದರ ಪ್ರೇಮ ಕೊಳವನ್ನು ನಿರ್ಮಿಸುತ್ತಾನೆ ಎಂಬ ಕಥೆ ಇದೆ.

ಭಾರತದಲ್ಲಿ ತಾಜ್ ಮಹಲ್ ಮೊದಲ ಪ್ರೀತಿಯ ಸ್ಮಾರಕ ಎನ್ನುತ್ತಾರೆ. ಆದರೆ ಈ ಕೊಳವನ್ನು ಅದಕ್ಕೂ ಮೊದಲೇ ಕೆಳದಿ ರಾಜನು ತನ್ನ ಪ್ರೇಯಸಿಯ ನೆನಪಿಗಾಗಿ ನಿರ್ಮಿಸಿರುವುದರಿಂದ ಇದು ನಮ್ಮ ದೇಶದ ಮೊದಲ ಪ್ರೇಮ ಮಂದಿರ ಎನ್ನಬಹುದು.
ಹಲವಾರು ವರ್ಷಗಳಿಂದ ಈ ಸ್ಥಳವು ದುರಸ್ತಿ ಹಂತವನ್ನು ತಲುಪಿತ್ತು ಆದ್ದರಿಂದ ಹೆಚ್ಚು ಗಮನ ಸೆಳೆದಿರಲಿಲ್ಲ. ಆದರೆ ನಟ ಯಶ್ ಅವರ ನೇತೃತ್ವದ ಯಶೋಮಾರ್ಗ ಎನ್‌ಜಿಒದ ಪ್ರಯತ್ನ ಮತ್ತು ಸ್ಥಳೀಯರ ಸಹಾಯದಿಂದ ಈ ಸ್ಥಳವು ಮತ್ತೆ ಮರುಜನ್ಮವನ್ನು ಪಡೆದುಕೊಂಡಿದೆ. ರಾಜ್ಯದ ನಾನಾ ಭಾಗಗಳಿಂದ ಬಂದು ಪ್ರವಾಸಿಗರು ಈ ಸ್ಥಳವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ ಹಾಗೂ ಇಲ್ಲಿಯ ಪ್ರಕೃತಿಯನ್ನು ಸವಿಯುವುದರ ಜೊತೆಗೆ ಹಲವಾರು ನವ ಜೋಡಿಗಳು ತಮ್ಮ ಮದುವೆಯ ಪ್ರೀ ವೆಡ್ಡಿಂಗ್ ಫೋಟೊ ಶೂಟ್ ಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ವಿಡಿಯೋಗಳನ್ನು ಮಾಡಿ ಹಂಚಿಕೊಳ್ಳುತ್ತಿದ್ದಾರೆ.
ಮೊದಲು ಭೇಟಿ ನೀಡುವವರು ಸ್ವಲ್ಪ ಹಿಂಜರಿಯಬಹುದು. ಏಕೆಂದರೆ, ಏನಪ್ಪಾ ಇದು ಹೀಗಿದೆ, ಈ ರಸ್ತೆಯಲ್ಲಿ ಹೋಗುವುದಾದರೂ ಹೇಗೆ ಎಂದು ತಲೆಕೆಡಿಸಿಕೊಳ್ಳಬಹುದು. ಆದರೆ, ಒಮ್ಮೆ ಒಳಗೆ ಹೋಗಿ ನೋಡಿದರೆ ವಾಪಸ್ ಹಿಂದಿರುಗಲೂ ಮನಸ್ಸಾಗುವುದಿಲ್ಲ, ಅಷ್ಟು ಸುಂದರವಾದ ಸ್ಥಳವಿದು. ಕೊಳನ್ನು ಸುತ್ತುವರೆದಿರುವ ಗೋಡೆಯು ಹಿಂದಿನ ಇತಿಹಾಸವನ್ನು ವಿವರಿಸುತ್ತವೆ ಹಾಗೂ ಇತ್ತೀಚಿನ ನವೀಕರಣವನ್ನು ಹೇಳುತ್ತದೆ, ಪ್ರವೇಶ ದಾರಿಯಲ್ಲಿ ಆನೆಗಳು ಸ್ವಾಗತ ಕೋರುತ್ತವೆ, ಆಯುತಾಕಾರದ ಕೊಳವು ಅಲ್ಲಿಯ ಪ್ರಶಾಂತತೆ ಮತ್ತು ಸ್ವಚ್ಛತೆಯನ್ನು ಸೂಚಿಸುತ್ತದೆ. ಕೊಳದ ಮಧ್ಯದಲ್ಲಿ ಶಿವನ ದೇಗುಲವಿದೆ. ದೇವಸ್ಥಾನಕ್ಕೆ ಹೋಗಲು ಕೊಳದ ಮಧ್ಯೆ ಕಲ್ಲಿನ ಸೇತುವೆಯನ್ನು ನಿರ್ಮಿಸಲಾಗಿದೆ ಹಾಗೂ ಕೊಳದ ಸುತ್ತ ಕಲ್ಲಿನ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ ಕೊಳದಲ್ಲಿರುವ ಮೀನುಗಳು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತವೆ.
ಹೀಗೆ ಅಲ್ಲಿಯ ಸ್ವಚ್ಛತೆ, ಪ್ರಶಾಂತವಾಗಿ ಬೀಸುವ ಗಾಳಿ, ತಂಪು ವಾತಾವರಣ, ಪ್ರವಾಸಿಗರಿಗೆ ಇನ್ನಷ್ಟು ಮುದಾನೀಡುತ್ತದೆ ಭೇಟಿ ನೀಡಿದವರ ಮನಸ್ಸಿಗೆ ತೃಪ್ತಿ ನೀಡುವಂತಹ ಐತಿಹಾಸಿಕ ಪ್ರವಾಸಿ ಸ್ಥಳವಾಗಿದೆ ಹಾಗೂ ಇದೊಂದು ಜಲನಿಧಿ ತಾಣವಾಗಿದೆ. ಇದರ ಸಂರಕ್ಷಣೆಯನ್ನು ಆನಂದಪುರ ಗ್ರಾಮ ಪಂಚಾಯತಿ ಹಾಗೂ ಸ್ಥಳೀಯ ಜನರೇ ನೋಡಿಕೊಳ್ಳುತ್ತಿದ್ದಾರೆ ಎನ್ನುವುದು ವಿಶೇಷ.

-ಸಂಗೀತ ಆರ್.