ಭಾರತೀಯ ಮಹಿಳಾ ತಂಡ ನ್ಯೂಜಿಲೆಂಡ್ ವಿರುದ್ಧದ ಏಕದಿನ ಟೂರ್ನಿಯಲ್ಲಿ ಶತಕ ಬಾರಿಸುವ ಮೂಲಕ ಸ್ಮೃತಿ ಮಂಧಾನ ತಂಡಕ್ಕೆ ಸರಣಿ ಜಯ ತಂದು ಕೊಟ್ಟಿದ್ದಾರೆ.
ಭಾರತ ತಂಡ 6 ವಿಕೆಟ್ ಗಳಿಂದ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದೆ. ಇದರೊಂದಿಗೆ ಭಾರತ ತಂಡ 3 ಪಂದ್ಯಗಳ ಸರಣಿಯನ್ನು 2-1 ಅಂತರದಲ್ಲಿ ಗೆದ್ದು ಬೀಗಿದೆ. ತಂಡದ ಉಪನಾಯಕಿ ಮತ್ತು ಅನುಭವಿ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಅವರ ಶತಕದ ಜೊತೆಯಾಟ ತಂಡವನ್ನು ಗೆಲುವಿನ ದಡ ಮುಟ್ಟಿಸಿತು. ಈ ಪಂದ್ಯದಲ್ಲಿ ಸ್ಮೃತಿ ಮಂಧಾನ ತಮ್ಮ ಏಕದಿನ ವೃತ್ತಿ ಜೀವನದ ದಾಖಲೆಯ 8 ನೇ ಶತಕ ಸಿಡಿಸಿದರು. ಅಲ್ಲದೇ, ನಾಯಕಿ ಹರ್ಮನ್ ಪ್ರೀತ್ ಕೌರ್ ಉತ್ತಮ ಬ್ಯಾಟಿಂಗ್ ನಡೆಸುವ ಮೂಲಕ ತಂಡದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು.
ಸರಣಿಯ ಕೊನೆಯ ಪಂದ್ಯದಲ್ಲಿ ನ್ಯೂಜಿಲೆಂಡ್ ಮೊದಲು ಬ್ಯಾಟ್ ಮಾಡಿ 49.5 ಓವರ್ ಗಳಲ್ಲಿ ಕೇವಲ 232 ರನ್ ಗಳಿಸಿತು. ಒಂದು ಹಂತದಲ್ಲಿ ಕಿವೀಸ್ ತಂಡ 88 ರನ್‌ಗಳಿಗೆ ಪ್ರಮುಖ 5 ವಿಕೆಟ್ ಕಳೆದುಕೊಂಡಿತ್ತು. ಆಗ ಬ್ರೂಕ್ ಹ್ಯಾಲಿಡೇ ಜವಾಬ್ದಾರಿ ವಹಿಸಿ ಭಾರತದ ಬೌಲರ್ಗಳನ್ನು ದಿಟ್ಟತನದಿಂದ ಎದುರಿಸಿದರು. ಹ್ಯಾಲಿಡೆ 86 ರನ್ (96 ಎಸೆತ, 9 ಬೌಂಡರಿ, 3 ಸಿಕ್ಸರ್) ಗಳಿಸಿ ಔಟಾದರು. ಪರಿಣಾಮವಾಗಿ ನ್ಯೂಜಿಲೆಂಡ್ ತಂಡ 232 ರನ್ ಗಳಿಸಿತು. ಭಾರತದ ಪರ ದೀಪ್ತಿ ಶರ್ಮಾ 3 ವಿಕೆಟ್ ಹಾಗೂ ಯುವ ಸ್ಪಿನ್ನರ್ ಪ್ರಿಯಾ ಮಿಶ್ರಾ 2 ವಿಕೆಟ್ ಪಡೆದು ಮಿಂಚಿದರು.
ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ಮತ್ತೊಮ್ಮೆ ಆರಂಭಿಕ ಆಘಾತ ಎದುರಾಯಿತು. ಶೆಫಾಲಿ ವರ್ಮಾ ನಾಲ್ಕನೇ ಓವರ್‌ನಲ್ಲಿಯೇ ಔಟಾದರು. ಟಿ20 ವಿಶ್ವಕಪ್ ಹಾಗೂ ಕೊನೆಯ ಎರಡು ಏಕದಿನ ಪಂದ್ಯಗಳಲ್ಲಿ ವೈಫಲ್ಯ ಕಂಡಿದ್ದ ಸ್ಮೃತಿ ಈ ಬಾರಿ ಎಚ್ಚರಿಕೆಯ ಆಟವಾಡಿ ಶತಕ ಸಿಡಿಸಿದರು. ಯಾಸ್ತಿಕಾ ಭಾಟಿಯಾ ಅವರಿಂದ ಉತ್ತಮ ಬೆಂಬಲ ಸಿಕ್ಕಿತು. ಈ ಇಬ್ಬರೂ ಎರಡನೇ ವಿಕೆಟ್‌ಗೆ 76 ರನ್‌ಗಳ ಬಲವಾದ ಜೊತೆಯಾಟವನ್ನು ಮಾಡುವ ಮೂಲಕ ಪರಿಸ್ಥಿತಿಯನ್ನು ನಿಭಾಯಿಸಿದರು. ನಾಯಕಿ ಹರ್ಮನ್‌ಪ್ರೀತ್ ಕೌರ್, ಉಪನಾಯಕಿ ಮಂಧಾನ ಜತೆಗೂಡಿ ತಂಡದ ಗೆಲುವನ್ನು ಖಚಿತಪಡಿಸಿದರು. ಇವರಿಬ್ಬರ ನಡುವೆ ಮೂರನೇ ವಿಕೆಟ್‌ಗೆ 117 ರನ್‌ಗಳ ಜೊತೆಯಾಟ ನೀಡಿದರು. ಹರ್ಮನ್‌ಪ್ರೀತ್ ಬೇಗನೆ ಅರ್ಧಶತಕ ಗಳಿಸಿದರೆ, ಸ್ವಲ್ಪ ಸಮಯದ ನಂತರ, ಸ್ಮೃತಿ ಕೂಡ ದಾಖಲೆಯ ಶತಕ ಪೂರ್ಣ ಮಾಡಿದರು. ಈ ಮೂಲಕ ಭಾರತ ತಂಡ ಸರಣಿ ಗೆದ್ದು ಬೀಗಿತು.