ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಮಹಿಳೆಯರು ಸಣ್ಣ ಪ್ರಮಾಣದಲ್ಲಿ ಹೂಡಿಕೆ ಮಾಡಲು ಉತ್ತೇಜನ ನೀಡುವ ದೃಷ್ಟಿಯಿಂದ ಜಾರಿಗೆ ತಂದಿದ್ದ ಯೋಜನೆಯನ್ನೇ ನಿಲ್ಲಿಸಿದೆ. ಹೌದು, ಕೇಂದ್ರ ಸರ್ಕಾರವು ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ (MSSC Scheme) ಯೋಜನೆಯನ್ನೇ (Mahila Samman Savings Certificate) ಸ್ಥಗಿತಗೊಳಿಸಿ ಆದೇಶ ಹೊರಡಿಸಿದೆ. ಇದರಿಂದಾಗಿ ದೇಶದ ಲಕ್ಷಾಂತರ ಹೆಣ್ಣುಮಕ್ಕಳಿಗೆ ಉಳಿತಾಯ ಮಾಡಲು ಅಡಚಣೆಯಾದಂತಾಗಿದೆ.
ಮಹಿಳಾ ಸಮ್ಮಾನ್ ಯೋಜನೆಯು 2025ರ ಮಾರ್ಚ್ 31 ರಂದು ಕೊನೆಗೊಂಡಿದೆ ಎಂದು ಆರ್ಥಿಕ ವ್ಯವಹಾರಗಳ ಇಲಾಖೆ ತಿಳಿಸಿದೆ. ಮಾರ್ಚ್ 27ರ ಅಧಿಕೃತ ಪತ್ರದ ಮೂಲಕ ಇದನ್ನು ದೃಢಪಡಿಸಲಾಗಿದೆ. ಈ ಯೋಜನೆಯಡಿ ಇನ್ನು ಮುಂದೆ ಹೊಸ ಠೇವಣಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಇದರೊಂದಿಗೆ ಎರಡು ವರ್ಷಗಳ ಹಿಂದೆ ಜಾರಿಗೆ ತಂದಿದ್ದ ಯೋಜನೆ ಸ್ಥಗಿತಗೊಂಡಂತಾಗಿದೆ.
“ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯ ಮಾರ್ಗಸೂಚಿಗಳು ಮತ್ತು ಅಧಿಸೂಚನೆಗಳ ಪ್ರಕಾರ, ಈ ಯೋಜನೆಯು 2025ರ ಮಾರ್ಚ್ 31 ರವರೆಗೆ ಮಾತ್ರ ಮಾನ್ಯವಾಗಿತ್ತು. ಅದರ ನಂತರ ಯಾವುದೇ ಹೊಸ ಠೇವಣಿಗಳನ್ನು ಸ್ವೀಕರಿಸಲಾಗುವುದಿಲ್ಲ” ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಮಹಿಳೆಯರ ಆರ್ಥಿಕ ಭದ್ರತೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು 2023ರ ಬಜೆಟ್ ನಲ್ಲಿ ಈ ವಿಶೇಷ ಯೋಜನೆ ಪರಿಚಯಿಸಿತ್ತು.
ಯೋಜನೆ ಅನ್ವಯ ಹೆಣ್ಣುಮಕ್ಕಳು ಒಂದು ಸಾವಿರ ರೂಪಾಯಿಯಿಂದ 2 ಲಕ್ಷ ರೂಪಾಯಿವರೆಗೆ ಹೂಡಿಕೆ ಮಾಡಬಹುದಾಗಿತ್ತು. ಹೂಡಿಕೆಯ ಮೊತ್ತಕ್ಕೆ ಕೇಂದ್ರ ಸರ್ಕಾರವು ಶೇ.7.5ರಷ್ಟು ಬಡ್ಡಿ ನೀಡುತ್ತಿತ್ತು. ಈಗ ಯೋಜನೆ ಸ್ಥಗಿತಗೊಂಡಿರುವ ಕಾರಣ ಹೆಣ್ಣುಮಕ್ಕಳು ಪಿಪಿಎಫ್, ಸುಕನ್ಯಾ ಸಮೃದ್ಧಿ ಯೋಜನೆ, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಸೇರಿ ಹಲವು ಯೋಜನೆಗಳಲ್ಲಿ ಹೂಡಿಕೆ ಮಾಡಬಹುದಾಗಿದೆ.