ನವದೆಹಲಿ: ಸ್ವಿಗ್ಗಿ, ಝೊಮ್ಯಾಟೊ, ಅಮೆಜಾನ್‌ನಂತಹ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಸೇವೆ ನೀಡುವ ಗಿಗ್ ವರ್ಕರ್‌ಗಳಿಗೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸಲು ಕೇಂದ್ರ ಕಾರ್ಮಿಕ ಸಚಿವಾಲಯವು ಕರಡು ನಿಯಮಗಳನ್ನು ರೂಪಿಸಿದೆ.
ಕೇಂದ್ರ ಸರ್ಕಾರದ ಈ ಕರಡು ನಿಯಮಗಳ ಪ್ರಕಾರ, ಯಾವುದೇ ಗಿಗ್ ವರ್ಕರ್ ಆರ್ಥಿಕ ವರ್ಷದಲ್ಲಿ ಕನಿಷ್ಠ 90 ದಿನಗಳ ಕಾಲ ಅಗ್ರಿಗೇಟರ್ (ಆನ್‌ಲೈನ್ ಸಂಸ್ಥೆ) ಜೊತೆ ಕೆಲಸ ಮಾಡಿದ್ದರೆ, ಅವರು ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳಿಗೆ ಅರ್ಹರಾಗುತ್ತಾರೆ.
ಏನಿದು 90 ದಿನಗಳ ನಿಯಮ?
ಒಂದು ಸಂಸ್ಥೆ: ಒಬ್ಬ ಗಿಗ್ ವರ್ಕರ್ ಒಂದು ಆರ್ಥಿಕ ವರ್ಷದಲ್ಲಿ ಒಂದೇ ಸಂಸ್ಥೆಯೊಂದಿಗೆ (ಉದಾಹರಣೆಗೆ ಸ್ವಿಗ್ಗಿ) ಕನಿಷ್ಠ 90 ದಿನಗಳ ಕಾಲ ಕೆಲಸ ಮಾಡಿರಬೇಕು.
ಬಹು ಸಂಸ್ಥೆಗಳು: ಒಂದು ವೇಳೆ ಅವರು ಒಂದಕ್ಕಿಂತ ಹೆಚ್ಚು ಸಂಸ್ಥೆಗಳಲ್ಲಿ (ಉದಾಹರಣೆಗೆ ಸ್ವಿಗ್ಗಿ ಮತ್ತು ಝೊಮ್ಯಾಟೊ ಎರಡರಲ್ಲೂ) ಕೆಲಸ ಮಾಡುತ್ತಿದ್ದರೆ, ಒಟ್ಟು 120 ದಿನಗಳ ಕಾಲ ಕೆಲಸ ಮಾಡಿರಬೇಕು.
ದಿನ ಲೆಕ್ಕಾಚಾರ ಹೇಗೆ?
ಯಾವುದೇ ದಿನ ಒಬ್ಬ ಕೆಲಸಗಾರ ಆಪ್ ಮೂಲಕ ಆದಾಯ ಗಳಿಸಿದರೆ, ಆ ದಿನವನ್ನು ‘ಕೆಲಸ ಮಾಡಿದ ದಿನ’ ಎಂದು ಪರಿಗಣಿಸಲಾಗುತ್ತದೆ. ಆದಾಯದ ಮೊತ್ತ ಎಷ್ಟೇ ಇರಲಿ, ಅದನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ. ಒಬ್ಬ ವ್ಯಕ್ತಿ ಒಂದೇ ದಿನದಲ್ಲಿ ಮೂರು ಬೇರೆ ಬೇರೆ ಸಂಸ್ಥೆಗಳಿಗೆ ಕೆಲಸ ಮಾಡಿದರೆ, ಅದನ್ನು ಮೂರು ದಿನಗಳ ಕೆಲಸ ಎಂದು ಲೆಕ್ಕ ಹಾಕಲಾಗುತ್ತದೆ.
ಡಿಜಿಟಲ್ ಐಡಿ ಕಾರ್ಡ್:
ಅಸಂಘಟಿತ ವಲಯದ ಕಾರ್ಮಿಕರಿಗಾಗಿ ರೂಪಿಸಲಾಗಿರುವ ‘ಇ-ಶ್ರಮ್’ (e-Shram) ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳುವ ಮೂಲಕ ಗಿಗ್ ವರ್ಕರ್‌ಗಳು ಈ ಸೌಲಭ್ಯ ಪಡೆಯಬಹುದು. ನೋಂದಾಯಿತ ಕಾರ್ಮಿಕರಿಗೆ ಫೋಟೋ ಸಹಿತ ಡಿಜಿಟಲ್ ಐಡಿ ಕಾರ್ಡ್ ನೀಡಲಾಗುವುದು.
ಹೊಸ ವರ್ಷದ ಮುನ್ನಾದಿನದಂದು ವೇತನ ಹೆಚ್ಚಳ ಮತ್ತು ಉತ್ತಮ ಕೆಲಸದ ಪರಿಸ್ಥಿತಿಗಳಿಗಾಗಿ ಗಿಗ್ ವರ್ಕರ್‌ಗಳು ಮುಷ್ಕರ ನಡೆಸಿದ್ದರು. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಕರಡು ಅಧಿಸೂಚನೆಯನ್ನು ಹೊರಡಿಸಿದೆ.
ಇದನ್ನೂ ಓದಿ: ಮಾರಕ ರೋಗದಿಂದ ಸಾವಿನ ದವಡೆ ತಲುಪಿದ ಆಸ್ಟ್ರೇಲಿಯಾದ ಕ್ರಿಕೆಟಿಗ ಡೇಮಿಯನ್ ಮಾರ್ಟಿನ್



















