ತಿರುವನಂತಪುರಂ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ದೊಡ್ಡ ಹಿನ್ನಡೆ ಎಂಬಂತೆ, ಕೊಚ್ಚಿನ್ ಮಿನರಲ್ಸ್ ಆಂಡ್ ರೂಟೈಲ್ ಲಿಮಿಟೆಡ್ (CMRL Case) ಪಾವತಿ ಪ್ರಕರಣದಲ್ಲಿ ಅವರ ಪುತ್ರಿ ವೀಣಾ ಟಿ. ವಿರುದ್ಧ ಪ್ರಾಸಿಕ್ಯೂಷನ್‌ಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ಕೊಚ್ಚಿ ಮೂಲದ ಸಂಸ್ಥೆಯಿಂದ ಅಕ್ರಮವಾಗಿ 2.70 ಕೋಟಿ ರೂ.ಗಳ ಹಣ ಸ್ವೀಕರಿಸಿರುವ ಪ್ರಕರಣದಲ್ಲಿ ವೀಣಾ ಅವರು ಎರಡನೇ ಆರೋಪಿಯಾಗಿದ್ದಾರೆ ಎಂದು ಗಂಭೀರ ವಂಚನೆ ತನಿಖಾ ಕಚೇರಿ(ಎಸ್‌ಎಫ್‌ಐಒ)ಯು ತನ್ನ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿತ್ತು. ಆರೋಪಪಟ್ಟಿಯನ್ನು ಎಸ್‌ಎಫ್‌ಐಒ ಕೊಚ್ಚಿಯ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ ಬೆನ್ನಲ್ಲೇ ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ವೀಣಾ ವಿರುದ್ಧ ತನಿಖೆಗೆ ಅನುಮತಿ ನೀಡಿದೆ.
ಏನಿದು ಪ್ರಕರಣ?
ಎಸ್‌ಎಫ್‌ಐಒ ತನಿಖೆಯ ಪ್ರಕಾರ, ವೀಣಾ ಅವರ ಐಟಿ ಸಂಸ್ಥೆ ಬೆಂಗಳೂರಿನ ಎಕ್ಸಾಲಾಜಿಕ್ ಸೊಲ್ಯೂಷನ್ಸ್ ಮತ್ತು ಸಿಎಂಆರ್‌ಎಲ್ ನಡುವೆ ಒಪ್ಪಂದವೊಂದು ನಡೆದಿತ್ತು. ಆದರೆ, ಯಾವುದೇ ಐಟಿ ಸೇವೆಗಳನ್ನು ಒದಗಿಸದೇ ಎಕ್ಸಾಲಾಜಿಕ್ ಸಂಸ್ಥೆಯು ಸಿಎಂಆರ್‌ಎಲ್‌ನಿಂದ ಒಟ್ಟು 2.73 ಕೋಟಿ ರೂಪಾಯಿಗಳನ್ನು ಪಡೆದಿದೆ ಎಂದು ಆರೋಪಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಆರೋಪಪಟ್ಟಿಯಲ್ಲಿ ವೀಣಾ, ಸಿಎಂಆರ್‌ಎಲ್‌ನ ವ್ಯವಸ್ಥಾಪಕ ನಿರ್ದೇಶಕ ಶಶಿಧರನ್ ಕಾರ್ತಾ ಸೇರಿದಂತೆ 25 ಇತರರು ಮತ್ತು ಕಂಪನಿಗಳಾದ ಸಿಎಂಆರ್‌ಎಲ್, ಎಕ್ಸಾಲಾಜಿಕ್ ಸೊಲ್ಯೂಷನ್ಸ್, ಮತ್ತು ಎಂಪವರ್ ಇಂಡಿಯಾ ಕ್ಯಾಪಿಟಲ್ ಇನ್‌ವೆಸ್ಟ್‌ಮೆಂಟ್ಸ್ ಗಳ ಹೆಸರುಗಳನ್ನೂ ಸೇರಿಸಲಾಗಿದೆ. ಎಸ್‌ಎಫ್‌ಐಒ ತನ್ನ 160 ಪುಟಗಳ ಆರೋಪಪಟ್ಟಿಯಲ್ಲಿ, ಈ ಪಾವತಿಗಳು ವಂಚನೆಯಿಂದ ಕೂಡಿದ್ದಾಗಿ ಹೇಳಿದೆ.
ಆಗಸ್ಟ್ 8, 2023ರಂದು ಈ ಪ್ರಕರಣ ಬೆಳಕಿಗೆ ಬಂದಿತ್ತು. ಎಕ್ಸಾಲಾಜಿಕ್ ಸಿಎಂಆರ್‌ಎಲ್‌ನಿಂದ 2017ರಿಂದ 2020ರವರೆಗೆ 1.72 ಕೋಟಿ ರೂಪಾಯಿಗಳನ್ನು ಪಡೆದಿದ್ದರೂ, ಎಕ್ಸಾಲಾಜಿಕ್ ಸಂಸ್ಥೆ ಸಿಎಂಆರ್‌ಎಲ್‌ಗೆ ಯಾವುದೇ ಸೇವೆಗಳನ್ನು ಒದಗಿಸಿರಲಿಲ್ಲ ಎಂದು ಆದಾಯ ತೆರಿಗೆ ಮಧ್ಯಂತರ ಪರಿಹಾರ ಮಂಡಳಿ ವರದಿ ಮಾಡಿತ್ತು. ಎಸ್‌ಎಫ್‌ಐಒ ತನಿಖೆಯು ಈ ಮೊತ್ತವನ್ನು 2.73 ಕೋಟಿ ರೂಪಾಯಿಗಳಿಗೆ ಏರಿಸಿದೆ. ಇದು ವೀಣಾ ಮತ್ತು ಅವರ ಸಂಸ್ಥೆಯು ಸ್ವೀಕರಿಸಿರುವ ಒಟ್ಟು ಮೊತ್ತವಾಗಿದೆ ಎಂದು ಆರೋಪಿಸಿದೆ.
ಕಾನೂನು ಆರೋಪಗಳು
ವೀಣಾ ಅವರ ಮೇಲೆ ಕಂಪನಿಗಳ ಕಾಯಿದೆ 2013ರ ಸೆಕ್ಷನ್ 447ರ ಅಡಿಯಲ್ಲಿ ಆರೋಪ ಹೊರಿಸಲಾಗಿದೆ. ಇದು ಕಾರ್ಪೊರೇಟ್ ವಂಚನೆಗೆ ಸಂಬಂಧಿಸಿ ಆರೋಪವಾಗಿದೆ. ಈ ಆರೋಪವು ಕನಿಷ್ಠ 10 ಲಕ್ಷ ರೂ. ಅಥವಾ ಕಂಪನಿಯ ಒಟ್ಟು ಆದಾಯದ ಒಂದು ಪ್ರತಿಶತದಷ್ಟು ಮೊತ್ತವನ್ನು ಒಳಗೊಂಡಿದ್ದರೆ, ಅಪರಾಧಿಗಳಿಗೆ 6 ತಿಂಗಳಿಂದ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ವಂಚನೆ ಮಾಡಿದ ಮೊತ್ತದ 3 ಪಟ್ಟು ದಂಡವನ್ನು ಒಳಗೊಂಡಿರುತ್ತದೆ.
ಪಿಣರಾಯಿ ರಾಜೀನಾಮೆಗೆ ವಿಪಕ್ಷ ಪಟ್ಟು
ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಕೇರಳದ ಪ್ರತಿಪಕ್ಷ ನಾಯಕ ವಿ.ಡಿ. ಸತೀಶನ್, “ಮುಖ್ಯಮಂತ್ರಿಯ ಪುತ್ರಿ ವೀಣಾ ವಿಜಯನ್ ಅವರನ್ನು ಎಸ್‌ಎಫ್‌ಐಒ ಆರೋಪಿಯಾಗಿ ಹೆಸರಿಸಿರುವುದು ಅತ್ಯಂತ ಗಂಭೀರ ವಿಷಯ. ಯಾವುದೇ ಸೇವೆ ಒದಗಿಸದೆ ಹಣ ಪಡೆದ ಆರೋಪವನ್ನು ಎಸ್‌ಎಫ್‌ಐಒ ಆರೋಪಪಟ್ಟಿ ದೃಢಪಡಿಸಿದೆ. ಈ ಅಪರಾಧಕ್ಕೆ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು. ವೀಣಾ ಅವರ ಕಂಪನಿಯು ಕೇವಲ ಮುಖ್ಯಮಂತ್ರಿಯ ಪುತ್ರಿಯಾಗಿ 2.7 ಕೋಟಿ ರೂಪಾಯಿಗಳನ್ನು ಪಡೆದಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಭ್ರಷ್ಟಾಚಾರದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಅವರ ಪುತ್ರಿ ಪ್ರಾಸಿಕ್ಯೂಷನ್ ಎದುರಿಸುತ್ತಿರುವಾಗ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯುವುದು ಸರಿಯಲ್ಲ” ಎಂದಿದ್ದಾರೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಕೆ.ಸುಧಾಕರನ್ ಅವರೂ, ಇಂಥ ಆರೋಪ ಕೇಳಿಬಂದಿರುವಾಗ ಸಿಎಂ ಪಿಣರಾಯಿ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯುವ ನೈತಿಕ ಅಧಿಕಾರವನ್ನು ಕಳೆದುಕೊಂಡಿದ್ದಾರೆ ಎಂದಿದ್ದಾರೆ. ಇನ್ನೊಂದೆಡೆ, ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರೂ ವಿಜಯನ್ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಆದರೆ, ಸಿಪಿಎಂ ಈ ಆರೋಪಗಳನ್ನು ರಾಜಕೀಯ ಪ್ರೇರಿತ ಎಂದಿದೆ.
ಇ.ಡಿ.ಯಿಂದಲೂ ತನಿಖೆ
ಪ್ರಕರಣ ಸಂಬಂಧ ಎಸ್‌ಎಫ್‌ಐಒ ತನ್ನ ಆರೋಪಪಟ್ಟಿಯನ್ನು ಸಲ್ಲಿಕೆ ಮಾಡಿದ್ದು, ಈಗ ವಿಶೇಷ ನ್ಯಾಯಾಲಯವು ಆರೋಪಿಗಳಿಗೆ ನೋಟಿಸ್ ಜಾರಿ ಮಾಡಲಿದೆ. ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಕೂಡ ಹಣ ಸ್ವೀಕಾರ ಆರೋಪದಡಿ ತನಿಖೆ ನಡೆಸುತ್ತಿದೆ. 2024ರ ಮಾರ್ಚ್‌ನಿಂದಲೇ ತನಿಖೆ ಆರಂಭವಾಗಿದೆ. ಈ ಎರಡೂ ತನಿಖೆಗಳು ಕೇರಳದ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿವೆ.