ಬೆಂಗಳೂರು: ನಮ್ಮ ಊರಿನಲ್ಲೇ ಸ್ವಂತದ್ದೊಂದು ಉದ್ಯಮ ಆರಂಭಿಸಬೇಕು, ಊರಿನಲ್ಲೇ ಇದ್ದು ಒಳ್ಳೆಯ ದುಡಿಮೆ ಮಾಡಬೇಕು ಎಂಬುದು ತುಂಬ ಯುವಕರ ಕನಸಾಗಿರುತ್ತದೆ. ಆದರೆ, ಉದ್ಯಮದ ಕನಸು ನನಸು ಮಾಡಿಕೊಳ್ಳಲು ಲಕ್ಷಾಂತರ ರೂಪಾಯಿ ಬಂಡವಾಳ ಬೇಕಾಗುತ್ತದೆ. ಅಷ್ಟೊಂದು ಹಣವನ್ನು ಎಲ್ಲಿಂದ ತರಬೇಕು ಎಂಬ ಚಿಂತೆ ಕಾಡುತ್ತದೆ. ಆದರೆ, ಈ ಚಿಂತೆಯನ್ನು ದೂರ ಮಾಡಲು ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮ (PMEGP Loan) ಜಾರಿಗೆ ತಂದಿದೆ. ಇದರ ಅನ್ವಯ ಉದ್ಯಮ ಆರಂಭಿಸಲು 5 ಲಕ್ಷ ರೂ.ನಿಂದ 50 ಲಕ್ಷ ರೂ.ವರೆಗೆ ಸಾಲ ಪಡೆಯಬಹುದಾಗಿದೆ.
ಉತ್ಪಾದನೆ ವಲಯದಲ್ಲಿ ಉದ್ಯಮ ಆರಂಭಿಸುವವರಿಗೆ 50 ಲಕ್ಷ ರೂ. ಹಾಗೂ ಸೇವಾ ವಲಯದಲ್ಲಿ ಉದ್ಯಮ ಆರಂಭಿಸಲು 50 ಲಕ್ಷ ರೂ.ವರೆಗೆ ಸಾಲ ನೀಡಲಾಗುತ್ತದೆ. ಇದರಲ್ಲಿ, ವ್ಯವಹಾರವನ್ನು ಪ್ರಾರಂಭಿಸುವ ವ್ಯಕ್ತಿಯು ಯೋಜನೆಯ ಒಟ್ಟು ವೆಚ್ಚದ ಶೇ.5ರಷ್ಟು ಮೊತ್ತವನ್ನು ಸ್ವತಃ ಹೊಂದಿಸಿಕೊಳ್ಳಬೇಕು. ಉಳಿದ ಮೊತ್ತವನ್ನು ಬ್ಯಾಂಕ್ ಸಾಲವಾಗಿ ಪಡೆಯಲಾಗುತ್ತದೆ. ಪಿಎಂಇಜಿಪಿಗಾಗಿ 5 ಹಣಕಾಸು ವರ್ಷಗಳ (2021-22 ರಿಂದ 2025-26) ಕ್ಕೆ 13,554 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿದೆ.
ಯೋಜನೆ ಅಡಿಯಲ್ಲಿ ಗ್ರಾಮೀಣ ಪ್ರದೇಶದ ಫಲಾನುಭವಿಗಳಿಗೆ ಶೇ.35ರಷ್ಟು ಸಬ್ಸಿಡಿ ಮತ್ತು ನಗರ ಪ್ರದೇಶಗಳಲ್ಲಿ ಶೇ.25ರಷ್ಟು ಸಬ್ಸಿಡಿ ಸಿಗುತ್ತದೆ. 10 ಲಕ್ಷ ರೂಪಾಯಿಗಳವರೆಗಿನ ಸಾಲಗಳಿಗೆ ಯಾವುದೇ ರೀತಿಯ ಖಾತರಿಯ ಅಗತ್ಯವಿಲ್ಲ ಎಂಬುದು ಪ್ರಮುಖ ಸಂಗತಿಯಾಗಿದೆ. 18 ವರ್ಷ ದಾಟಿದವರು, ಕನಿಷ್ಠ 8ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.
ಯಾವ ದಾಖಲೆ ಬೇಕು?
ಪಿಎಂಇಜಿಪಿ ಮೂಲಕ ಸಾಲ ಪಡೆಯಲು ಕೆಲವು ದಾಖಲೆಗಳನ್ನು ನೀಡಬೇಕಾಗುತ್ತದೆ. ಜಾತಿ ಪ್ರಮಾಣಪತ್ರ, ಗ್ರಾಮೀಣ ಪ್ರದೇಶದ ಸರ್ಟಿಫಿಕೇಟ್, ಯೋಜನಾ ವರದಿ, ಶೈಕ್ಷಣಿಕ ವಿವರ, ಕೌಶಲ ಅಭಿವೃದ್ಧಿ ತರಬೇತ ಪ್ರಮಾಣಪತ್ರ ಸೇರಿ ಹಲವು ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಈ ದಾಖಲೆಗಳನ್ನು ಪರಿಶೀಲಿಸಿ ಸಾಲ ಮಂಜೂರು ಮಾಡಲಾಗುತ್ತದೆ.
ಸಾಲಕ್ಕೆ ಅರ್ಜಿ ಸಲ್ಲಿಸೋದು ಹೇಗೆ?
- ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ (KVIC) ಅಧಿಕೃತ ವೆಬ್ ಸೈಟ್ ಗೆ (https://www.kviconline.gov.in/) ಭೇಟಿ ನೀಡಿ
- ಆಗ PMEGP ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಇದು ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮದ ಪೇಜ್ ತೆರೆಯುತ್ತದೆ.
- ಹೊಸ ಘಟಕಕ್ಕೆ ಅರ್ಜಿ ಸಲ್ಲಿಸಲು ಅರ್ಜಿ ಸಲ್ಲಿಸು ಆಯ್ಕೆ ಮೇಲೆ ಕ್ಲಿಕ್ ಮಾಡಿ
- ಅರ್ಜಿ ನಮೂನೆಯಲ್ಲಿ ಕೇಳಿರುವ ಎಲ್ಲಾ ಮಾಹಿತಿ ಒದಗಿಸಿ
- ಘೋಷಣೆ ನಮೂನೆಯನ್ನು ಟಿಕ್ ಮಾಡಿ ಮತ್ತು ಅಪ್ಲಿಕೇಶನ್ ಡೇಟಾದ ಸೇವ್ ಮೇಲೆ ಕ್ಲಿಕ್ ಮಾಡಿ
- ಇದರೊಂದಿಗೆ ನಿಮ್ಮ ಅರ್ಜಿ ನಮೂನೆಯನ್ನು ಸಲ್ಲಿಸಲಾಗುತ್ತದೆ. ಹಾಗೆಯೇ, ನಿಮಗೆ ಬಳಕೆದಾರ ಐಡಿ, ಪಾಸ್ವರ್ಡ್ ಸಿಗುತ್ತದೆ