ಉಡುಪಿ: ಕೇಂದ್ರ ಸರ್ಕಾರದ ಪಂಚಾಯತ್ ರಾಜ್ ಸಚಿವಾಲಯ ಪ್ರಕಟಿಸಿದ 2025ನೇ ಸಾಲಿನ ದೀನ್ ದಯಾಳ್ ಉಪಾಧ್ಯಾಯ್ ಪಂಚಾಯತ್ ಸತತ ಅಭಿವೃದ್ಧಿ ಪುರಸ್ಕಾರಕ್ಕೆ ಕರ್ನಾಟಕ ರಾಜ್ಯದಿಂದ ಆಯ್ಕೆಯಾದ ಆರು ಗ್ರಾಮ ಪಂಚಾಯತ್‌ಗಳಲ್ಲಿ ಐದು ಪಂಚಾಯತ್‌ಗಳು ಉಡುಪಿ ಜಿಲ್ಲೆಗೆ ಸೇರಿವೆ.
ಹೆಬ್ರಿ ತಾಲೂಕಿನ ಮುದ್ರಾಡಿ ಮತ್ತು ಮಡಾಮಕ್ಕಿ, ಕುಂದಾಪುರ ತಾಲೂಕಿನ ವಂಡ್ಲೆ ಮತ್ತು ಹಕ್ಲಾಡಿ ಹಾಗೂ ಕಾರ್ಕಳ ತಾಲೂಕಿನ ಸಾಣೂರು ಉಡುಪಿ ಜಿಲ್ಲೆಯಿಂದ ಆಯ್ಕೆಯಾದ ಐದು ಗ್ರಾಮ ಪಂಚಾಯತ್‌ಗಳಾಗಿವೆ. ಬೆಂಗಳೂರು ನಗರ ಜಿಲ್ಲೆಯ ಹಾಲನಾಯಕನಹಳ್ಳಿ ರಾಷ್ಟ್ರೀಯ ಮಟ್ಟದ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಮತ್ತೊಂದು ಗ್ರಾಮ ಪಂಚಾಯತ್ ಆಗಿದೆ.
ಕೇಂದ್ರ ಸರ್ಕಾರ ಒಟ್ಟು ಆರು ವಿಭಾಗದಲ್ಲಿ ಪ್ರಶಸ್ತಿಯನ್ನ ನೀಡುತ್ತಿದ್ದು,ಇವುಗಳಲ್ಲಿ ಮುದ್ರಾಡಿ ಗ್ರಾಮ ಪಂಚಾಯತ್ ಬಡತನ ಮುಕ್ತ ಹಾಗೂ ಜೀವನೋಪಾಯ ಸಂವರ್ಧನ ವಿಭಾಗದಲ್ಲಿ ಪ್ರಶಸ್ತಿ ಪಡೆದರೆ, ವಂಡ್ಸೆ ಗ್ರಾಮ ಪಂಚಾಯತ್ ಆರೋಗ್ಯಪೂರ್ಣ ಪಂಚಾಯತ್ ವಿಭಾಗದಲ್ಲಿ ಪ್ರಶಸ್ತಿಯನ್ನು ಗೆದ್ದು ಕೊಂಡಿದೆ. ಹೆಬ್ರಿ ತಾಲೂಕಿನ ಮಡಾಮಕ್ಕಿ ಗ್ರಾಪಂ, ಜಲಸಮೃದ್ಧ ಮೂಲಸೌಕರ್ಯ ಅಭಿವೃದ್ಧಿ ವಿಭಾಗದಲ್ಲಿ ಪ್ರಶಸ್ತಿ ಪಡೆದಿದೆ.
ಕಾರ್ಕಳ ತಾಲೂಕಿನ ಸಾಣೂರು ಗ್ರಾಪಂ, ಸ್ವಯಂಸಮೃದ್ಧ ಮೂಲ ಸೌಕರ್ಯ ಅಭಿವೃದ್ಧಿ ವಿಭಾಗದಲ್ಲಿ ಹಾಗೂ ಹಕ್ಲಾಡಿ ಗ್ರಾಪಂ ಸಾಮಾಜಿಕ ನ್ಯಾಯ ಹಾಗೂ ಸಾಮಾಜಿಕ ಸುರಕ್ಷತಾ ಪಂಚಾಯತ್ ವಿಭಾಗದಲ್ಲಿ ರಾಜ್ಯದ ಅತ್ಯುತ್ತಮ ಪಂಚಾಯತ್ ಆಗಿ ಮಾನ್ಯತೆ ಪಡೆದಿದೆ. ಬೆಂಗಳೂರಿನ ಹಾಲನಾಯಕನಹಳ್ಳಿ ಪಂಚಾಯತ್ ಮಕ್ಕಳ ಸ್ನೇಹಿ ಪಂಚಾಯತ್ ಆಗಿ ಪುರಸ್ಕಾರಕ್ಕೆ ಆಯ್ಕೆಯಾಗಿದೆ ಎಂದು ಕೇಂದ್ರ ಪಂಚಾಯತ್‌ರಾಜ್ ಸಚಿವಾಲಯದ ಪ್ರಕಟಣೆ ತಿಳಿಸಿದೆ.


















