ಬೀದರ್: ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಸಚಿವರೂ ಆದ ಶತಾಯುಷಿ ಭೀಮಣ್ಣ ಖಂಡ್ರೆ (Bhimanna Khandre) ಅವರು ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಭೀಮಣ್ಣ ಖಂಡ್ರೆ ಅವರು ತಮ್ಮ 102 ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.
ಭೀಮಣ್ಣ ಖಂಡ್ರೆ ಅವರು ಮಹಾತ್ಮಗಾಂಧಿಯವರ ಕರೆ ಓಗೊಟ್ಟು ಸ್ವಾತಂತ್ರ್ಯ ಹೋರಾಟದಲ್ಲಿ ದುಮುಕಿದರು. ಬಳಿಕ ಕರ್ನಾಟಕ ಏಕೀಕರಣ ಚಳವಳಿಯಲ್ಲೂ ಸಕ್ರಿಯರಾಗಿ ಬೀದರ್ ಜಿಲ್ಲೆಯನ್ನು ಕರ್ನಾಟಕದಲ್ಲೇ ಉಳಿಸಿಕೊಳ್ಳಲು ಹೋರಾಟ ನಡೆಸಿದರು. ಇವರ ಹೋರಾಟದ ಹೆಜ್ಜೆಗಳು ಈ ಮಣ್ಣಿನಲ್ಲಿ ದಾಖಲಾಗಿವೆ. ಬಸವಣ್ಣನವರ ಅಪ್ಪಟ ಅನುಯಾಯಿಯಾಗಿರುವ ಭೀಮಣ್ಣ ಖಂಡ್ರೆಯವರು ವಚನ ಸಾಹಿತ್ಯವನ್ನು ಇಡಿ ರಾಜ್ಯಕ್ಕೆ ಪಸರಿಸಲು ಶ್ರಮಿಸಿದ್ದಾರೆ.
ರಾಜಕೀಯ ಜೀವನ
ಭೀಮಣ್ಣ ಖಂಡ್ರೆ ಅವರಿಗೆ ಚಿಕ್ಕವರಾಗಿದ್ದಾಗಲೇ ರಾಜಕೀಯದ ಆಸಕ್ತಿ ಇತ್ತು. ಹಾಗಾಗಿ ಅವರು,1953ರಲ್ಲಿ ಭಾಲ್ಕಿ ಪುರಸಭೆ ಅಧ್ಯಕ್ಷರಾಗಿ ರಾಜಕೀಯ ಕ್ಷೇತ್ರಕ್ಕೆ ದುಮುಕಿದ ಭೀಮಣ್ಣ ಖಂಡ್ರೆ ಅವರು 1962, 1967, 1978 ಮತ್ತು 1983ರಲ್ಲಿ ನಾಲ್ಕು ಬಾರಿ ಭಾಲ್ಕಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 1980ರಲ್ಲಿ ಕೆಪಿಸಿಸಿ ರಾಜ್ಯ ಉಪಾಧ್ಯಕ್ಷರಾಗಿ, 1988ರಲ್ಲಿ ಬೀದರ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು.
ಸಾರಿಗೆ ಸಚಿವರಾಗಿ ಕೆಲಸ
ಇವರು 1992ರಲ್ಲಿ ಮೊಯ್ಲಿ ಸರ್ಕಾರದ ಕ್ಯಾಬಿನೆಟ್ನಲ್ಲಿ ಸಾರಿಗೆ ಸಚಿವರಾಗಿದ್ದರು. 1994 ಹಾಗೂ 2000ರಲ್ಲಿ ಎರಡು ಸಲ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು. 1999ರಲ್ಲಿ ಅಖಿಲ ಭಾರತೀಯ ವೀರಶೈವ ಮಹಾಸಭಾದ ಅಧ್ಯಕ್ಷರಾಗಿದ್ದರು. ಅದಾದ ಬಳಿಕ 2005ರಲ್ಲಿ ಮರು ಆಯ್ಕೆಯಾಗಿ 2011ರವರೆಗೆ 12 ವರ್ಷ ಕಾಲ ಸುದೀರ್ಘವಾಗಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು.
ಇಂದು ಸಂಜೆ ಪತ್ನಿ ಸಮಾಧಿ ಪಕ್ಕದಲ್ಲೇ ಅಂತ್ಯಕ್ರಿಯೆ
ವೀರಶೈವ ಲಿಂಗಾಯತ ಸಮುದಾಯದ ಹಿರಿಯ ಮುಖಂಡ, ಮುತ್ಸದ್ದಿ, ಶತಾಯುಷಿ ಭೀಮಣ್ಣ ಖಂಡ್ರೆ ಅವರ ಪಾರ್ಥಿವ ಶರೀರವನ್ನು ಶನಿವಾರ ಬೆಳಗ್ಗೆ ಭಾಲ್ಕಿಯ ಗಾಂಧಿ ಗಂಜ್ ನಲ್ಲಿರುವ ಅವರ ಮನೆಯ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು ಎಂದು ಮೂಲಗಳು ತಿಳಿಸಿವೆ. ತದನಂತರ, ಸಂಜೆ ಭಾಲ್ಕಿಯ ಚಿಕಲ್ ಚಂದ ರಸ್ತೆಯಲ್ಲಿನ ಶಾಂತಿಧಾಮದಲ್ಲಿ ಭೀಮಣ್ಣ ಖಂಡ್ರೆ ಅವರ ಪತ್ನಿಯ ಸಮಾಧಿಯ ಪಕ್ಕದಲ್ಲೇ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ. ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನಗಳು ನೆರವೇರಲಿವೆ ಎಂದು ಖಂಡ್ರೆ ಅವರ ಪುತ್ರ, ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಇದನ್ನೂ ಓದಿ: ಶತಾಯುಷಿ, ಸ್ವಾತಂತ್ರ್ಯ ಹೋರಾಟಗಾರ ಮಾಜಿ ಸಚಿವ ಭೀಮಣ್ಣ ಖಂಡ್ರೆ ವಿಧಿವಶ



















