ನವದೆಹಲಿ: ಸುಪ್ರೀಂಕೋರ್ಟ್ ಇತ್ತೀಚೆಗೆ ಖನಿಜಗಳ ಮೇಲೆ ಪ್ರತ್ಯೇಕ ತೆರಿಗೆ ವಿಧಿಸಲು ರಾಜ್ಯ ಸರ್ಕಾರಗಳಿಗೆ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಸುಣ್ಣದ ಕಲ್ಲಿನ ನಿಕ್ಷೇಪಗಳ ಮೇಲೆ ತೆರಿಗೆ ವಿಧಿಸಲು ರಾಜ್ಯ ಸರ್ಕಾರಗಳು ನಿರ್ಧರಿಸಿದ್ದು, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಸಿಮೆಂಟ್ ಬೆಲೆ(Cement price) ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಜೆಎಂ ಫೈನಾನ್ಶಿಯಲ್ ವರದಿ ಮಾಡಿದೆ.
ಸಿಮೆಂಟ್ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುವ ಸುಣ್ಣದ ಕಲ್ಲು ನಿಕ್ಷೇಪಗಳು ಕರ್ನಾಟಕದಲ್ಲೂ ಹರಡಿಕೊಂಡಿವೆ. ಇದರ ಮೇಲೆ ಹೊಸ ತೆರಿಗೆ ವಿಧಿಸುವ ಬಗ್ಗೆ ಕರ್ನಾಟಕ ಸರ್ಕಾರ ಈಗಾಗಲೇ ಚರ್ಚೆ ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ. 2024ರ ಜುಲೈ ತಿಂಗಳಲ್ಲಿ ತೀರ್ಪು ನೀಡಿದ್ದು ಸರ್ವೋಚ್ಚ ನ್ಯಾಯಾಲಯ, ರಾಯಧನದ ಜೊತೆಗೆ ಖನಿಜ ಹಕ್ಕುಗಳು ಮತ್ತು ಖನಿಜ ಹೊಂದಿರುವ ಭೂಮಿಯ ಮೇಲೆ ತೆರಿಗೆ ವಿಧಿಸಲು ರಾಜ್ಯಗಳಿಗೆ ಅವಕಾಶ ನೀಡಿತು. ಇದಾದ ನಂತರ, ತಮಿಳುನಾಡು ಸರ್ಕಾರವು ಖನಿಜ ಹೊಂದಿರುವ ಭೂ ತೆರಿಗೆ ಕಾಯ್ದೆ, 2024 ಅನ್ನು ಜಾರಿ ಮಾಡಿದೆ. ತಮಿಳುನಾಡಿನ ಈ ಹೊಸ ಕಾಯ್ದೆಯ ಅನ್ವಯ ಪ್ರತಿ ಟನ್‌ಗೆ ಹೆಚ್ಚುವರಿ 160 ರೂ. ತೆರಿಗೆ ವಿಧಿಸಲಾಗುತ್ತಿದೆ. ಇದೇ ವರ್ಷದ ಫೆಬ್ರವರಿ 20ರಿಂದಲೇ ಈ ಕಾನೂನು ಅಲ್ಲಿ ಜಾರಿಯಾಗಿದೆ. ಇದರ ಬೆನ್ನಲ್ಲೇ ಕರ್ನಾಟಕ ಸರ್ಕಾರ ಕೂಡ ಈ ನಿಟ್ಟಿನಲ್ಲಿ ಚಿಂತನೆ ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ.
ಈ ಕ್ರಮದಿಂದಾಗಿ ಸಿಮೆಂಟ್‌ನ ಉತ್ಪಾದನಾ ವೆಚ್ಚದಲ್ಲಿ ಏರಿಕೆಯಾಗುತ್ತಿದ್ದು, ಕಂಪನಿಗಳು ಲಾಭದಾಯಕತ್ವವನ್ನು ಉಳಿಸಿಕೊಳ್ಳುವ ಸಲುವಾಗಿ ಸಿಮೆಂಟ್ ಬೆಲೆಯನ್ನೂ ಶೀಘ್ರದಲ್ಲೇ ಏರಿಕೆ ಮಾಡಲಿವೆ ಎಂದು ವರದಿಯೊಂದು ತಿಳಿಸಿದೆ. ವೆಚ್ಚದ ಪರಿಣಾಮವನ್ನು ಸರಿದೂಗಿಸಲು, ತಮಿಳುನಾಡಿನಲ್ಲಿ ಸಿಮೆಂಟ್ ಬೆಲೆ ಪ್ರತಿ ಚೀಲಕ್ಕೆ 8-10 ರೂ.ಗಳಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಈ ಹೊಸ ತೆರಿಗೆ ಹೊರೆಯಿಂದಾಗಿ ಕಂಪನಿಗಳಿಗೆ ಬೆಲೆ ಏರಿಕೆಯ ಮೂಲಕ ಹೆಚ್ಚುವರಿ ವೆಚ್ಚವನ್ನು ಗ್ರಾಹಕರಿಗೆ ವರ್ಗಾಯಿಸುವುದನ್ನು ಬಿಟ್ಟು ಬೇರೆ ಆಯ್ಕೆಗಳಿಲ್ಲ ಎಂದು ಉದ್ಯಮ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ಮಾತ್ರವಲ್ಲದೇ ಸುಣ್ಣದ ಕಲ್ಲಿನ ನಿಕ್ಷೇಪ ಹೊಂದಿರುವ ಇತರೆ ರಾಜ್ಯಗಳು ಕೂಡ ತಮಿಳುನಾಡು ಮಾದರಿಯನ್ನೇ ಅನುಸರಿಸುವ ಸಾಧ್ಯತೆಯಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ. ಇದು ಜಾರಿಯಾದರೆ ಕೆಲವೇ ದಿನಗಳಲ್ಲಿ ದೇಶಾದ್ಯಂತ ಸಿಮೆಂಟ್ ದರದಲ್ಲಿ ಭಾರೀ ಏರಿಕೆಯಾಗುವ ಸಾಧ್ಯತೆಯಿದೆ.