ಬೆಂಗಳೂರು: ಆನ್ ಲೈನ್ ವಹಿವಾಟು, ಆಧಾರ್-ಪ್ಯಾನ್ ಲಿಂಕ್ ಆಗಿರುವುದರಿಂದ ಬ್ಯಾಂಕಿನಲ್ಲಿರುವ ನಮ್ಮ ಉಳಿತಾಯ ಖಾತೆಗೆ ಜಮೆಯಾಗುವ ಎಲ್ಲ ಹಣದ ದಾಖಲೆಯೂ ಇರುತ್ತದೆ. ಸ್ಯಾಲರಿ, ಬಿಸಿನೆಸ್ ಅಕೌಂಟ್ ಇದ್ದರೆ, ಅದಕ್ಕೆ ಲಕ್ಷಾಂತರ ರೂಪಾಯಿ ಜಮೆಯಾದರೆ ಏನೂ ತೊಂದರೆ ಇಲ್ಲ. ಆದರೆ, ಉಳಿತಾಯ ಖಾತೆಗೆ ಕ್ಯಾಶ್ ಮೂಲಕ 50 ಸಾವಿರ ರೂ. ಅಥವಾ 1 ಲಕ್ಷ ರೂ. ಅಥವಾ ಅದಕ್ಕಿಂತ ಹೆಚ್ಚಿನ ಠೇವಣಿ ಇರಿಸಲು ಆರ್ ಬಿ ಐ ಕೆಲ ನಿಯಮಗಳನ್ನು ರೂಪಿಸಿದೆ.
ಒಂದೇ ದಿನದಲ್ಲಿ ಒಂದೇ ಖಾತೆಗೆ 50 ಸಾವಿರ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು ನಗದು ಠೇವಣಿ ಮಾಡಿದರೆ, ಖಾತೆದಾರರು ತಮ್ಮ ಪ್ಯಾನ್ ಕಾರ್ಡ್ ನಂಬರ್ ಅನ್ನು ಬ್ಯಾಂಕಿಗೆ ಸಲ್ಲಿಸುವುದು ಕಡ್ಡಾಯವಾಗಿದೆ. ಹಾಗೆಯೇ, ಒಂದು ಲಕ್ಷ ರೂಪಾಯಿಗಿಂತ ಹೆಚ್ಚು ನಗದು ಠೇವಣಿ ಮಾಡಿದಾಗ, ಬ್ಯಾಂಕ್ ಆ ವಹಿವಾಟಿನ ವಿವರವನ್ನು ಆದಾಯ ತೆರಿಗೆ ಇಲಾಖೆಗೆ ವರದಿ ಮಾಡಬೇಕು ಎಂದು ನಿಯಮವಿದೆ. ಈ ವರದಿಯನ್ನು Cash Transaction Report ಎಂದು ಕರೆಯಲಾಗುತ್ತದೆ.
ಅದೇ ರೀತಿ, ಒಂದು ಹಣಕಾಸು ವರ್ಷದಲ್ಲಿ ಒಂದೇ ಖಾತೆಗೆ ಒಟ್ಟು 10 ಲಕ್ಷ ರೂಪಾಯಿಗಿಂತ ಹೆಚ್ಚು ನಗದು ಠೇವಣಿ ಮಾಡಿದರೆ, ಬ್ಯಾಂಕುಗಳು ಈ ಮಾಹಿತಿಯನ್ನು ತೆರಿಗೆ ಇಲಾಖೆಗೆ Annual Information Return (AIR) ಆಗಿ ಸಲ್ಲಿಸುತ್ತವೆ. ಇಂತಹ ಸಂದರ್ಭಗಳಲ್ಲಿ, ತೆರಿಗೆ ಇಲಾಖೆಯು ಖಾತೆದಾರರಿಂದ ಆ ಹಣದ ಮೂಲ ಕುರಿತು ವಿವರ ಕೇಳಬಹುದು. ದಾಖಲೆಗಳನ್ನು ಕೂಡ ಕೇಳಬಹುದು. ಅಗತ್ಯ ದಾಖಲೆ ಒದಗಿಸಲು ವಿಫಲರಾದರೆ, ದಂಡ ವಿಧಿಸುವ ಸಾಧ್ಯತೆಯೂ ಇರುತ್ತದೆ.
ಒಂದು ವರ್ಷದಲ್ಲಿ 2.5 ಲಕ್ಷ ರೂಪಾಯಿವರೆಗೆ ನಗದು ಠೇವಣಿ ಮಾಡಿದರೆ ಸಾಮಾನ್ಯವಾಗಿ ಯಾವುದೇ ತನಿಖೆ ನಡೆಸುವುದಿಲ್ಲ. ಉಳಿತಾಯ ಖಾತೆಯಲ್ಲಿ ಠೇವಣಿ ಮಾಡಲು ಒಟ್ಟು ಹಣದ ಮಿತಿ ಇಲ್ಲ. ಆದರೆ ನಗದು ಠೇವಣಿ ಮಾತ್ರ ನಿಯಂತ್ರಣಕ್ಕೆ ಒಳಪಟ್ಟಿರುತ್ತದೆ. ಹಾಗಾಗಿ, ಗ್ರಾಹಕರು ಎಲ್ಲ ನಗದು ವಹಿವಾಟುಗಳ ಸರಿಯಾದ ದಾಖಲೆಗಳನ್ನು (ರಸೀದಿಗಳು, ಇನ್ ವಾಯ್ಸ್ ಇತ್ಯಾದಿ) ಇಟ್ಟುಕೊಳ್ಳುವುದು ಅಗತ್ಯ ಹಾಗೂ ಸುರಕ್ಷಿತ ಮಾರ್ಗವಾಗಿದೆ.