ಲಕ್ನೋ : ವೃತ್ತಿಜೀವನದ ಆಯ್ಕೆ ಕುರಿತು ಅಪ್ಪ-ಮಗನ ನಡುವೆ ಆರಂಭವಾದ ಜಗಳವು ಅಪ್ಪನ ಬರ್ಬರ ಹತ್ಯೆಯಲ್ಲಿ ಅಂತ್ಯಗೊಂಡ ಭೀಕರ ಘಟನೆ ಉತ್ತರಪ್ರದೇಶದ ಲಕ್ನೋದಲ್ಲಿ ನಡೆದಿದೆ. ತನ್ನ ತಂದೆಯನ್ನು ಗುಂಡಿಕ್ಕಿ ಕೊಂದಿದ್ದಲ್ಲದೆ, ಮೃತದೇಹವನ್ನು ಹಲವು ತುಂಡುಗಳಾಗಿ ತುಂಡರಿಸಿ ವಿಲೇವಾರಿ ಮಾಡಿದ ಆರೋಪದ ಮೇಲೆ 21 ವರ್ಷದ ಯುವಕನನ್ನು ಲಕ್ನೋ ಪೊಲೀಸರು ಬಂಧಿಸಿದ್ದಾರೆ. ಮತ್ತೊಂದು ಆಘಾತಕಾರಿ ಸಂಗತಿಯೆಂದರೆ, ಕೊಲೆ ಮಾಡಿದ ಪಾಪಿ ಪುತ್ರ ತನ್ನ ಸಹೋದರಿಯ ಮುಂದೆಯೇ ಅಪ್ಪನ ಮೃತದೇಹವನ್ನು ತುಂಡರಿಸಿದ್ದ ಎಂಬ ವಿಚಾರವೂ ತಿಳಿದುಬಂದಿದೆ.
ಡ್ರಮ್‌ನಲ್ಲಿ ಸಿಕ್ಕವು ದೇಹದ ಭಾಗಗಳು
ಔಷಧ ಹಾಗೂ ಮದ್ಯದ ವ್ಯಾಪಾರ ನಡೆಸುತ್ತಿದ್ದ 49 ವರ್ಷದ ಮನ್ವೇಂದ್ರ ಸಿಂಗ್ ಅವರು ಶುಕ್ರವಾರದಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು ಅವರ ಮನೆಗೆ ಭೇಟಿ ನೀಡಿದಾಗ ಅಸಲಿ ಸತ್ಯ ಬಯಲಾಗಿದೆ. ಮನೆಯಲ್ಲಿದ್ದ ನೀಲಿ ಬಣ್ಣದ ಡ್ರಮ್ (ಪೀಪಾಯಿ)ನಲ್ಲಿ ಮನ್ವೇಂದ್ರ ಅವರ ದೇಹದ ಭಾಗಗಳು ಪತ್ತೆಯಾಗಿವೆ. ಈ ಆಘಾತಕಾರಿ ದೃಶ್ಯ ಕಂಡ ಪೊಲೀಸರು ಅವರ ಮಗ ಅಕ್ಷತ್ ಪ್ರತಾಪ್ ಸಿಂಗ್‌ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ತಾನೇ ಮಾಡಿದ ಭೀಕರ ಕೊಲೆಯ ಸತ್ಯವನ್ನು ಆತ ಬಾಯಿಬಿಟ್ಟಿದ್ದಾನೆ.
ವೈದ್ಯನಾಗುವಂತೆ ಒತ್ತಡ ಹೇರಿದ್ದೇ ಕೊಲೆಗೆ ಕಾರಣ
ತಮ್ಮ ಮಗ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ವೈದ್ಯಕೀಯ ಕ್ಷೇತ್ರದಲ್ಲಿ ಭವಿಷ್ಯ ರೂಪಿಸಿಕೊಳ್ಳಬೇಕು ಎಂಬುದು ತಂದೆ ಮನ್ವೇಂದ್ರ ಸಿಂಗ್ ಅವರ ಆಸೆಯಾಗಿತ್ತು. ಆದರೆ, ಮಗ ಅಕ್ಷತ್‌ಗೆ ಇದು ಸುತಾರಾಂ ಇಷ್ಟವಿರಲಿಲ್ಲ. ಇದೇ ವಿಚಾರವಾಗಿ ತಂದೆ-ಮಗನ ನಡುವೆ ಆಗಾಗ ಜಗಳ ನಡೆಯುತ್ತಲೇ ಇತ್ತು. ಈ ಹಿಂದೆ ಇದೇ ಕಾರಣಕ್ಕೆ ಆತ ಒಮ್ಮೆ ಮನೆಯಿಂದ ಓಡಿಹೋಗಿದ್ದ. ಶುಕ್ರವಾರ ಸಂಜೆ ಸುಮಾರು 4.30ರ ಸುಮಾರಿಗೆ ಮತ್ತೆ ಇದೇ ವಿಚಾರವಾಗಿ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ಕೋಪದ ಭರದಲ್ಲಿ ಅಕ್ಷತ್ ರೈಫಲ್‌ನಿಂದ ಗುಂಡು ಹಾರಿಸಿ ಅಪ್ಪನನ್ನೇ ಹತ್ಯೆಗೈದಿದ್ದಾನೆ.
ತಂಗಿಯ ಮುಂದೆಯೇ ಕ್ರೌರ್ಯ
ತಂದೆಯನ್ನು ಮೂರನೇ ಮಹಡಿಯಲ್ಲಿ ಕೊಂದ ಬಳಿಕ, ಮೃತದೇಹವನ್ನು ನೆಲಮಹಡಿಯಲ್ಲಿರುವ ಖಾಲಿ ಕೋಣೆಗೆ ಎಳೆದು ತಂದಿದ್ದಾನೆ. ನಂತರ ಮೃತದೇಹವನ್ನು ತುಂಡರಿಸಲು ಶುರುಮಾಡಿದ್ದಾನೆ. ಈ ಭೀಕರ ದೃಶ್ಯವನ್ನು ಕಂಡ ಆತನ ಸಹೋದರಿ ಬೆಚ್ಚಿಬಿದ್ದಿದ್ದಾಳೆ. ಆದರೆ, ಆಕೆಯನ್ನು ಬೆದರಿಸಿ ಸುಮ್ಮನಾಗಿಸಿದ ಅಕ್ಷತ್, ಆಕೆಯ ಮುಂದೆಯೇ ತಂದೆಯ ದೇಹವನ್ನು ಕತ್ತರಿಸಿ, ಪ್ಲಾಸ್ಟಿಕ್ ಕವರ್‌ಗಳಲ್ಲಿ ತುಂಬಿದ್ದಾನೆ. ದೇಹದ ಕೆಲವು ಭಾಗಗಳನ್ನು ಸದರುನಾ ಬಳಿ ಎಸೆದು ಬಂದಿದ್ದಾನೆ. ಮುಂಡ ಸೇರಿದಂತೆ ಉಳಿದ ಕೆಲವು ಭಾಗಗಳನ್ನು ಮನೆಯಲ್ಲೇ ಇದ್ದ ನೀಲಿ ಡ್ರಮ್‌ನಲ್ಲಿ ಬಚ್ಚಿಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯ ತಪ್ಪೊಪ್ಪಿಗೆಯ ನಂತರ, ವಿಧಿವಿಜ್ಞಾನ (ಫೊರೆನ್ಸಿಕ್) ತಂಡವನ್ನು ಸ್ಥಳಕ್ಕೆ ಕರೆಯಿಸಲಾಗಿದ್ದು, ಮನೆಯಿಂದ ಸಾಕ್ಷ್ಯಾಧಾರಗಳನ್ನು ಕಲೆಹಾಕಲಾಗುತ್ತಿದೆ. ಹೊರಗೆ ಬಿಸಾಡಿರುವ ದೇಹದ ಉಳಿದ ಭಾಗಗಳ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ಆಶಿಯಾನಾ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿ ವಿಕ್ರಾಂತ್ ವೀರ್ ತಿಳಿಸಿದ್ದಾರೆ. ಸದ್ಯ ಅಕ್ಷತ್‌ನನ್ನು ಪೊಲೀಸ್ ಕಸ್ಟಡಿಯಲ್ಲಿರಿಸಲಾಗಿದ್ದು, ಲಭ್ಯ ಸಾಕ್ಷ್ಯಗಳ ಆಧಾರದ ಮೇಲೆ ಸೂಕ್ತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ : 7 ಸೀಟರ್ ಎಸ್‌ಯುವಿಗಳ ಮೇಲೆ 5 ಲಕ್ಷ ರೂ. ವರೆಗೆ ಭಾರಿ ರಿಯಾಯಿತಿ | ಖರೀದಿಸಲು ಇದು ಸಕಾಲ



















