ಬೆಂಗಳೂರು: ರಸ್ತೆಯಲ್ಲಿ ಎಲ್ಲೆಂದರಲ್ಲಿ ಬಿಸಾಡಿದ ಕಸ, ಗುಂಡಿಗಳು ಹಾಗೂ ಬೀದಿ ದೀಪ ಇಲ್ಲದಿರುವುದಕ್ಕೆ ಸಾರ್ವಜನಿಕರು ಬಿಬಿಎಂಪಿಗೆ ಹಿಡಿಶಾಪ ಹಾಕುತ್ತಿದ್ದರು. ಹತ್ತಾರು ಬಾರಿ ದೂರು ನೀಡುತ್ತಿದ್ದರು. ಹಲವು ಸಂದರ್ಭಗಳಲ್ಲಿ ದೂರಿಗೂ ಬೆಲೆ ಇಲ್ಲದಂತಾಗುತ್ತಿತ್ತು.
ಆದರೆ, ಇನ್ನು ಮುಂದೆ ಸಾರ್ವಜನಿಕರ ಈ ಸಂಕಷ್ಟ ಹಾಗೂ ತಾಪತ್ರಯಕ್ಕೆ ಸ್ವತಃ ಬಿಬಿಎಂಪಿ ತಿಲಾಂಜಲಿ ಇಡಲು ಮುಂದಾಗಿದೆ. ಎಐ ತಂತ್ರಜ್ಞಾನದ ಮೂಲಕ ಸಾರ್ವಜನಿಕರ ಇಂತಹ ಸಮಸ್ಯೆಗಳಿಗೆ ಮುಕ್ತಿ ಹಾಡಲು ಮುಂದಾಗಿದೆ.
ಬಿಬಿಎಂಪಿಯೇ ಎಐ ತಂತ್ರಜ್ಞಾನ ಅಳವಡಿಸಿ ಸಮಸ್ಯೆ ಪತ್ತೆ ಮಾಡಿ ಪರಿಹಾರ ನೀಡಲು ಮುಂದಾಗಿದೆ. ಹೀಗಾಗಿ ನಾಗರಿಕರ ಸಮಸ್ಯೆ ಪತ್ತೆ ಮಾಡಲು ಎಐ ಮೊರೆ ಹೋಗಿದೆ. ಅರ್ಟಿಫಿಶಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನ ಪಾಲಿಕೆಯಲ್ಲಿನ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲಿದೆ. ಸಮಸ್ಯೆಗಳ ಫೋಟೋ ಕ್ಲಿಕ್ಕಿಸಿ, ಅದನ್ನು ಬಿಬಿಎಂಪಿಗೆ ಕಳುಹಿಸಿ, ಪರಿಹಾರ ಕಾಣುವವರೆಗೆ ಬೆನ್ನು ಬಿದ್ದಿರುತ್ತದೆ.
ಸಿಲಿಕಾನ್ ಸಿಟಿಯಲ್ಲಿ ಪ್ರತಿದಿನ ಒಂದಿಲ್ಲ ಒಂದು ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುತ್ತವೆ. ಈ ಬಗ್ಗೆ ಸಾರ್ವಜನಿಕರು ಕೂಡ ದೂರು ನೀಡಿದರೂ ಯಾವುದೇ ಇತ್ಯರ್ಥವಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಎಐ ತಂತ್ರಜ್ಞಾನ ಬಳಕೆಗೆ ಮುಂದಾಗಿದೆ. ಪೊಲೀಸ್ ಇಲಾಖೆಯ ಸಹಭಾಗಿತ್ವದಲ್ಲಿ ಈ ಯೋಜನೆ ಜಾರಿಗೆ ತರಲಾಗಿದೆ.
ಪೊಲೀಸ್ ಇಲಾಖೆ ಈಗಾಗಲೇ ನಗರದ ಎಲ್ಲಾ ವಾರ್ಡ್ ಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿದೆ. ನಿರ್ಭಯಾ ಯೋಜನೆ ಅಡಿ ಪೊಲೀಸ್ ಇಲಾಖೆ ಬೀದಿ-ಬೀದಿಗಳಲ್ಲಿ ಕ್ಯಾಮರಾ ಅಳವಡಿಸಿದೆ. ನಗರದ ರಸ್ತೆಗಳಲ್ಲಿ ಸುಮಾರು 6 ಸಾವಿರಕ್ಕೂ ಅಧಿಕ ಸಿಸಿ ಕ್ಯಾಮೆರಾ ಕಾರ್ಯನಿರ್ವಹಿಸುತ್ತಿವೆ.
ಈ ಕ್ಯಾಮರಾಗಳ ಸಹಾಯದಿಂದ ಪಾಲಿಕೆಯ ಸಮಸ್ಯೆಗಳನ್ನು ಕ್ಲಿಕ್ ಮಾಡಿ ಎಐ ಪೋಟೋ ಅಪ್ ಲೋಡ್ ಮಾಡುತ್ತದೆ. ಪೋಟೋ ಅಪ್ ಲೋಡ್ ಅಗುತ್ತಿದಂತೆ ಪಾಲಿಕೆ ಕೇಂದ್ರ ಕಚೇರಿಯ ವಾರ್ ರೂಮ್ ಗೆ ಮಾಹಿತಿ ಲಭಿಸುತ್ತದೆ. ಈ ಮಾಹಿತಿ ಪಾಲಿಕೆಯ ಸಿಬ್ಬಂದಿಗಳು ಸಮಸ್ಯೆಗಳಿಗೆ ಪರಿಹಾರ ನೀಡುತ್ತಾರೆ. ಎಐ ತಂತ್ರಜ್ಞಾನ ಈ ಕ್ಯಾಮೆರಾಗಳ ಸಹಾಯದಿಂದ ಬೀದಿ ದೀಪ, ರಸ್ತೆ ಗುಂಡಿ, ರಾಜ ಕಾಲುವೆ, ಉದ್ಯಾನವನ, ಕೆರೆ, ಮೈದಾನ, ಕಸ ಸೇರಿದಂತೆ ಎಲ್ಲ ಸಮಸ್ಯೆಗಳನ್ನು ಪತ್ತೆ ಹಚ್ಚುತ್ತದೆ.
ಇದಕ್ಕಾಗಿ ಬಿಬಿಎಂಪಿ 3 ಕೋಟಿ ರೂ. ವೆಚ್ಚದಲ್ಲಿ ತಂತ್ರಜ್ಞಾನ ಬಳಕೆಗೆ ಖಾಸಗಿ ಕಂಪನಿಗೆ ಗುತ್ತಿಗೆ ನೀಡಿದೆ. ಒಂದು ವೇಳೆ ಇದು ಯಶಸ್ವಿಯಾದರೆ, ಜನರು ನೆಮ್ಮದಿಯಿಂದ ಇರಬಹುದು. ತಾವು ದೂರು ನೀಡದೆ, ಮನೆಯ ಪಕ್ಕದ ಸಮಸ್ಯೆಗಳು ಮುಕ್ತವಾಗುತ್ತಿರುವುದನ್ನು ಗಮನಿಸಬಹುದು.