ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಒಳ ಮೀಸಲಾತಿ ಕಲ್ಪಿಸಬೇಕು ಎಂಬ ಎಡಗೈ ಸಮುದಾಯದವರ 35 ವರ್ಷಗಳ ಹೋರಾಟಕ್ಕೆ ಕೊನೆಗೂ ಜಯ ದೊರಕಿದೆ. ನಾಗಮೋಹನ್ ದಾಸ್ ಅವರ ಏಕಸದಸ್ಯ ಆಯೋಗ ನೀಡಿರುವ ವರದಿಯನ್ನ ಸಂಪುಟ ಸಭೆ ಒಪ್ಪಿಗೆ ನೀಡಿರುವುದು ಸ್ವಾಗತಾರ್ಹ ಸಂಗತಿ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.
ಈ ಮೂಲಕ ಎಲ್ಲಾ ಹೋರಾಟಗಾರರಿಗೂ ಪಕ್ಷದ ವತಿಯಿಂದ ಅಭಿನಂದನೆ ಸಲ್ಲಿಸುತ್ತೇನೆ. ನ್ಯಾ. ಸದಾಶಿವ ವರದಿ ಆಯೋಗವನ್ನು ಯಥಾವತ್ತಾಗಿ ಅಳವಡಿಸದ ಕಾರಣದಿಂದ ಅಲೆಮಾರಿ ಹಾಗೂ ಇನ್ನಿತರ ಧ್ವನಿ ಇಲ್ಲದ ಸಣ್ಣ ಸಣ್ಣ ಜಾತಿಗಳಿಗೆ ಒಳಮೀಸಲಾತಿಯ ಲಾಭ ದಕ್ಕುವುದಿಲ್ಲವೆಂಬ ಭಾವನೆಯೂ ಇದೆ ಎಂದು ತಿಳಿಸಿದ್ದಾರೆ.
ಇನ್ನು, ಮುಂಬರುವ ದಿನಗಳಲ್ಲಿ ಬಾಕಿ ಇರುವ ಎಲ್ಲಾ ನೇಮಕಾತಿಗಳು, ಮುಂಬಡ್ತಿಗಳು ಶೀಘ್ರದಲ್ಲಾಗಬೇಕು. ಪರಿಶಿಷ್ಟ ಜಾತಿ ಹಾಗೂ ಪಂಗಡಗಳು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಸಬಲೀಕರಣಗೊಳ್ಳಲು ಸರ್ಕಾರ ಪರಿಶಿಷ್ಟರಿಗೆ ಮೀಸಲಿಟ್ಟಿರುವ ಹಣವನ್ನು ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಆಮೂಲಾಗ್ರವಾಗಿ ಬದಲಾವಣೆಗೆ ಬಳಸಿಕೊಳ್ಳಬೇಕಿದೆ ಎಂದು ಚಂದ್ರು ಒತ್ತಾಯಿಸಿದ್ದಾರೆ.
ಈ ಸಮಾಜದ ಮಕ್ಕಳಿಗೆ ವಿಶ್ವ ಗುಣಮಟ್ಟದ ಆಧುನಿಕ ಸರ್ಕಾರಿ ಶಿಕ್ಷಣ ವ್ಯವಸ್ಥೆಯನ್ನು ಕಲ್ಪಿಸುವಂತಹ ಯೋಜನೆಗಳು ಜಾರಿಯಾಗಬೇಕಿದೆ ಎಂದು ತಿಳಿಸಿದರು.



















