ತಿರುವನಂತಪುರಂ : ಬೆಂಗಳೂರಿನಲ್ಲಿ ಆದಾಯ ತೆರಿಗೆ (ಐಟಿ) ಇಲಾಖೆಯ ಶೋಧ ಕಾರ್ಯಾಚರಣೆಯ ವೇಳೆ ಖ್ಯಾತ ಉದ್ಯಮಿ, ‘ಕಾನ್ಫಿಡೆಂಟ್ ಗ್ರೂಪ್’ ಅಧ್ಯಕ್ಷ ಸಿ.ಜೆ. ರಾಯ್ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಷ್ಟ್ರಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿರುವಂತೆಯೇ, ಈ ನಿಗೂಢ ಸಾವಿನ ಕುರಿತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಪ್ರಕರಣದ ಬಗ್ಗೆ ಉನ್ನತ ಮಟ್ಟದ ನ್ಯಾಯಾಂಗ ತನಿಖೆ ನಡೆಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ನಿರ್ಮಲಾ ಸೀತಾರಾಮನ್‌ಗೆ ಪತ್ರ
ಈ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್, “ಐಟಿ ದಾಳಿ ನಡೆಯುತ್ತಿರುವಾಗಲೇ ಉದ್ಯಮಿಯೊಬ್ಬರು ಪ್ರಾಣ ಕಳೆದುಕೊಂಡಿರುವುದು ದೇಶದ ತೆರಿಗೆ ಆಡಳಿತ ವ್ಯವಸ್ಥೆಗೆ ಅಂಟಿದ ಕಪ್ಪುಚುಕ್ಕೆ” ಎಂದು ಟೀಕಿಸಿದ್ದಾರೆ. ನಾಗರಿಕ ಸಮಾಜದಲ್ಲಿ ತೆರಿಗೆ ವಂಚನೆಯನ್ನು ತಡೆಯುವುದು ಎಷ್ಟು ಮುಖ್ಯವೋ, ಅಷ್ಟೇ ಮುಖ್ಯವಾಗಿ ಒಬ್ಬ ವ್ಯಕ್ತಿಯ ಘನತೆ ಮತ್ತು ಜೀವವನ್ನು ರಕ್ಷಿಸುವುದು ಕೂಡ ಸರ್ಕಾರದ ಜವಾಬ್ದಾರಿ ಎಂದು ಅವರು ಪ್ರತಿಪಾದಿಸಿದ್ದಾರೆ.

ಭದ್ರತಾ ಲೋಪದ ಬಗ್ಗೆ ಗಂಭೀರ ಪ್ರಶ್ನೆ
ಐಟಿ ಅಧಿಕಾರಿಗಳ ಕಣ್ಗಾವಲಿನಲ್ಲಿದ್ದ ಸ್ಥಳದಲ್ಲಿ ರಾಯ್ ಅವರು ಲೋಡ್ ಮಾಡಲಾಗಿದ್ದ ಪಿಸ್ತೂಲನ್ನು ಹೇಗೆ ಕೈಗೆತ್ತಿಕೊಳ್ಳಲು ಸಾಧ್ಯವಾಯಿತು ಎಂಬುದು ಈಗ ದೊಡ್ಡ ಪ್ರಶ್ನೆಯಾಗಿ ಉಳಿದಿದೆ. ಶೋಧ ಕಾರ್ಯಾಚರಣೆಯ ಸಮಯದಲ್ಲಿ ಅಧಿಕಾರಿಗಳು ಪಾಲಿಸಬೇಕಾದ ಕನಿಷ್ಠ ಭದ್ರತಾ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ಪಿಣರಾಯಿ ವಿಜಯನ್ ಆರೋಪಿಸಿದ್ದಾರೆ. ಉದ್ಯಮಿಗೆ ಐಟಿ ಅಧಿಕಾರಿಗಳು ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂಬ ಕುಟುಂಬಸ್ಥರ ದೂರುಗಳನ್ನು ಅವರು ಪತ್ರದಲ್ಲಿ ಉಲ್ಲೇಖಿಸಿದ್ದು, ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತಟಸ್ಥ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಎಸ್‌ಐಟಿ ತನಿಖೆ ಚುರುಕು
ಮತ್ತೊಂದೆಡೆ, ಈ ಹೈಪ್ರೊಫೈಲ್ ಕೇಸ್‌ನ ತನಿಖೆಗಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತರು ವಿಶೇಷ ತನಿಖಾ ತಂಡವನ್ನು (SIT) ರಚಿಸಿದ್ದಾರೆ. ಜಂಟಿ ಪೊಲೀಸ್ ಕಮಿಷನರ್ ಸಿ. ವಂಶಿ ಕೃಷ್ಣ ಅವರ ನೇತೃತ್ವದ ಈ ತಂಡವು ಈಗಾಗಲೇ ಘಟನಾ ಸ್ಥಳದ ಮಹಜರು ನಡೆಸಿದೆ. ಐಟಿ ಅಧಿಕಾರಿಗಳು ಜನವರಿ 30ರಂದು ಲ್ಯಾಂಗ್‌ಫೋರ್ಡ್ ಟೌನ್‌ನಲ್ಲಿರುವ ರಾಯ್ ಅವರ ಕಚೇರಿಗೆ ಅಂತಿಮ ಸಹಿ ಪಡೆಯಲು ತೆರಳಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಉದ್ಯಮಿಯ ಕೊಠಡಿಯೊಳಗೆ ಗುಂಡು ಹಾರಿದ ಶಬ್ದ ಯಾರಿಗೂ ಕೇಳಿಸದಿರುವುದು ಮತ್ತು ಘಟನೆಯ ಸಮಯದ ಬಗ್ಗೆ ಸಾಕ್ಷ್ಯಗಳು ನೀಡಿರುವ ಹೇಳಿಕೆಯಲ್ಲಿನ ವ್ಯತ್ಯಾಸಗಳು ಪೊಲೀಸರಲ್ಲಿ ಅನುಮಾನ ಮೂಡಿಸಿವೆ.

ಇದನ್ನೂ ಓದಿ : 90ರ ಹರೆಯದಲ್ಲಿ ದಲೈ ಲಾಮಾಗೆ ಒಲಿದ ‘ಗ್ರ್ಯಾಮಿ’ ಗೌರವ | ಆಧ್ಯಾತ್ಮಿಕ ಲೋಕದ ಧ್ವನಿಗೆ ಜಾಗತಿಕ ಮನ್ನಣೆ!



















