ಬೈಂದೂರು : ನಾವುಂದ ಗ್ರಾಮ ಪಂಚಾಯತ್ ಆಶ್ರಯದಲ್ಲಿ ಇಂದು (ಬುಧವಾರ) ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಕುಂದಾಪುರ, ಲಯನ್ಸ್ ಕ್ಲಬ್ ನಾವುಂದ, ರೋಟರಿ ಕ್ಲಬ್ ಕುಂದಾಪುರ ಇವರ ಸಹಯೋಗದಲ್ಲಿ ನಡೆದ ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಪೌಷ್ಟಿಕಾಂಶ ಆಹಾರಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಆಯುಷ್ ವೈದ್ಯಾಧಿಕಾರಿ ಡಾ. ವಿನಯಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ನಮ್ಮ ಹಿರಿಯರ ಸಾಂಪ್ರದಾಯಿಕ ಆಹಾರ ಪದ್ಧತಿ ಹಾಗೂ ನಮ್ಮ ಸುತ್ತಮುತ್ತಲ ಬೆಳೆಯುವ ಸೊಪ್ಪು ತರಕಾರಿಗಳು ಪೋಷಕಾಂಶಗಳ ಆಗರವಾಗಿದೆ. ದಿನನಿತ್ಯದ ಆಹಾರದಲ್ಲಿ ಇದನ್ನು ಉಪಯೋಗಿಸುವುದರಿಂದ ನಮಗೆ ಪೌಷ್ಟಿಕಾಂಶಗಳ ಕೊರತೆ ಉಂಟಾಗದು. ಕೇವಲ ಮಕ್ಕಳು, ಮಹಿಳೆಯರಿಗೆ ಮಾತ್ರವಲ್ಲ ಪುರುಷರಿಗೂ ಕೂಡ ಪೌಷ್ಟಿಕಾಂಶವುಳ್ಳ ಆಹಾರ ಅಗತ್ಯನಮ್ಮ ದಿನಚರ್ಯೆ, ಆಹಾರ ವಿಹಾರ ಪದ್ಧತಿ ಹಾಗೂ ಮಾನಸಿಕ ಸಂಕುಲತೆಯನ್ನು ಜೀವನದಲ್ಲಿ ಅನುಸರಿಸರಿಸುವುದೇ ನಮ್ಮ ಮೂಲ ಮಂತ್ರ. ಇದನ್ನು ಎಲ್ಲರೂ ಕೂಡ ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಇಂದಿನ ಯುವಜನರು ಸಾಂಪ್ರದಾಯಿಕ ಪೌಷ್ಟಿಕಾಂಶದ ಆಹಾರ ಸೇವನೆ ಬಿಟ್ಟು ಪಾಶ್ಚಿಮಾತ್ಯ ಆಹಾರದ ಕಡೆಗೆ ಒಲವು ತೋರುತ್ತಿದ್ದಾರೆ. ಇದರಿಂದ ರಕ್ತಹೀನತೆ, ಅಪೌಷ್ಟಿಕತೆ, ಬೊಜ್ಜುತನ ಉಂಟಾಗುತ್ತದೆ. ಈ ನೆಲೆಯಲ್ಲಿ ಕೇಂದ್ರ ಸರ್ಕಾರ ಆಹಾರ ಕ್ರಮಗಳ ಅರಿವು ಮೂಡಿಸಲು ಪೋಷಣ್ ಅಭಿಯಾನ ಜಾರಿಗೆ ತಂದಿದೆ ಎಂದಿದ್ದಾರೆ.
ಗ್ರಾಪಂ ಅಧ್ಯಕ್ಷ ನರಸಿಂಹ ದೇವಾಡಿಗ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.
ಗ್ರಾಪಂ ಕಾರ್ಯದರ್ಶಿ ಶಂಕರ ಆಚಾರ್ಯ ಸ್ವಚ್ಛತಾ ಹಿ ಸೇವಾ ಅಭಿಯಾನದ ಪ್ರತಿಜ್ಞಾವಿಧಿ ಬೋಧಿಸಿದರು.
ಮಹಿಳೆಯರು ಮನೆಯಿಂದ ತಯಾರಿಸಿ ತಂದಿರುವ ಪೌಷ್ಟಿಕಾಂಶಭರಿತ ತಿಂಡಿಗಳ ಪ್ರದರ್ಶನ ನಂತರ ಆಯ್ಕೆಯಾದ ತಿನಿಸುಗಳಿಗೆ ಬಹುಮಾನ ನೀಡಲಾಯಿತು. ಗರ್ಭಿಣಿಯರಿಗೆ ಸೀಮಂತಪೂಜೆ ನೆರವೇರಿಸಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಸಂಯೋಜಕಿ ಶಾರದಾ, ರೋಟರಿ ಅಧ್ಯಕ್ಷ ನಾಗರಾಜ ಶೆಟ್ಟಿ, ಸರ್ವೋದಯ ಪೂಜಾರಿ, ಲಯನ್ಸ್ ಅಧ್ಯಕ್ಷ ನಿತ್ಯಾನಂದ ಆಚಾರ್ಯ, ಪಿಎಚ್‌ಸಿಒ ನಾಗರತ್ನ, ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು
ಶಿಶು ಅಭಿವೃದ್ಧಿ ಯೋಜನೆ ಮೇಲ್ವಿಚಾರಕಿ ಬೇಬಿ ಸ್ವಾಗತಿಸಿ, ಮಂಜುನಾಥ ಕಾರ್ಯಕ್ರಮ ನಿರ್ವಹಿಸಿದರು.