ನವದೆಹಲಿ: ಏಳು ರಾಜ್ಯಗಳಲ್ಲಿ ನಡೆದ 13 ವಿಧಾನಸಭಾ ಸ್ಥಾನಗಳ ಉಪಚುನಾವಣೆ (Assembly Bypoll results) ಮತ ಎಣಿಕೆ ಫಲಿತಾಂಶ ಪ್ರಕಟವಾಗಿದ್ದು, ಇಂಡಿಯಾ ಬಣ (INDIA bloc) 10 ಸ್ಥಾನಗಳಲ್ಲಿ ಗೆಲುವು ಕಂಡಿದೆ.
ಅಲ್ಲದೇ, ಬಿಜೆಪಿ (BJP) ಎರಡು ಕ್ಷೇತ್ರಗಳಲ್ಲಿ ಮತ್ತು ಪಕ್ಷೇತರ ಅಭ್ಯರ್ಥಿಯೊಬ್ಬರು ಒಂದು ಕ್ಷೇತ್ರ ಗೆದ್ದಿದ್ದಾರೆ. ಜುಲೈ 10 ರಂದು ಚುನಾವಣೆ ನಡೆದ ವಿಧಾನಸಭಾ ಕ್ಷೇತ್ರಗಳಲ್ಲಿ, ಹಿಮಾಚಲ ಪ್ರದೇಶದ ಡೆಹ್ರಾ ಮತ್ತು ನಲಗಢ್ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದೆ.
ಡೆಹ್ರಾದಲ್ಲಿ ಸಿಎಂ ಸುಖವಿಂದರ್ ಸಿಂಗ್ ಸುಖು ಅವರ ಪತ್ನಿ ಕಮಲೇಶ್ ಠಾಕೂರ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿತ್ತು. ಬಿಜೆಪಿಯ ಹೋಶ್ಯಾರ್ ಸಿಂಗ್ ವಿರುದ್ಧ 9,399 ಮತಗಳ ಅಂತರದಿಂದ ಗೆದ್ದಿದ್ದಾರೆ. ನಲಗಢ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಹರ್ದೀಪ್ ಸಿಂಗ್ ಬಾವಾ ಅವರು ಬಿಜೆಪಿಯ ಕೆಎಲ್ ಠಾಕೂರ್ ವಿರುದ್ಧ 8,990 ಮತಗಳ ಅಂತರದ ಗೆಲುವು ಕಂಡಿದ್ದಾರೆ.

ಹಮೀರ್‌ಪುರ ಕ್ಷೇತ್ರದಲ್ಲಿ ಬಿಜೆಪಿಯ ಆಶಿಶ್ ಶರ್ಮಾ ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ನಾಯಕ ಪುಷ್ಪಿಂದರ್ ವರ್ಮಾ ಅವರನ್ನು 1,571 ಮತಗಳ ಅಂತರದಿಂದ ಸೋಲಿಸಿದ್ದಾರೆ. ಉತ್ತರಾಖಂಡದಲ್ಲಿ ಎರಡು ಸ್ಥಾನಗಳಿಗೆ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಲಖಪತ್ ಸಿಂಗ್ ಬುಟೋಲಾ ಬದರಿನಾಥ್‌ನಿಂದ ಗೆದ್ದು, ಬಿಜೆಪಿಯ ರಾಜೇಂದ್ರ ಸಿಂಗ್ ಭಂಡಾರಿ ಅವರನ್ನು 5,224 ಮತಗಳ ಅಂತರದಿಂದ ಸೋಲಿಸಿದ್ದಾರೆ. ಮಂಗಳೂರ್ ಕ್ಷೇತ್ರದಲ್ಲಿ ಬಿಜೆಪಿಯ ಕರ್ತಾರ್ ಸಿಂಗ್ ಭದಾನ 422 ಮತಗಳಿಂದ ಸೋತಿದ್ದಾರೆ. ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ನಾಲ್ಕು ವಿಧಾನಸಭಾ ಸ್ಥಾನಗಳನ್ನು ಗೆದ್ದಿದೆ. ಅದರ ಅಭ್ಯರ್ಥಿಗಳಾದ ಕೃಷ್ಣ ಕಲ್ಯಾಣಿ ರಾಯಗಂಜ್‌ನಿಂದ, ಮುಕುತ್ ಮಣಿ ಅಧಿಕಾರಿ ರಣಘಾಟ್ ದಕ್ಷಿಣದಿಂದ, ಮಧುಪರ್ಣ ಠಾಕೂರ್ ಬಾಗ್ಡಾದಿಂದ ಮತ್ತು ಸುಪ್ತಿ ಪಾಂಡೆ ಮಾಣಿಕ್ತಾಲಾದಿಂದ ಗೆಲುವು ಕಂಡಿದ್ದಾರೆ.

ತಮಿಳುನಾಡಿನ ವಿಕ್ರವಾಂಡಿ ವಿಧಾನಸಭಾ ಕ್ಷೇತ್ರದಲ್ಲಿ ದ್ರಾವಿಡ ಮುನ್ನೇಟ್ರ ಕಳಗಂ (ಡಿಎಂಕೆ) ನಾಯಕ ಅಣ್ಣಿಯೂರ್ ಶಿವ ಗೆದ್ದಿದ್ದಾರೆ. ಅಣ್ಣಿಯುರ್ ಶಿವ ಅವರು ಪಟ್ಟಾಲಿ ಮಕ್ಕಳ್ ಕಚ್ಚಿ (ಪಿಎಂಕೆ) ಅಭ್ಯರ್ಥಿ ಅನ್ಬುಮಣಿ ಸಿ ಅವರನ್ನು 6,700ಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದಿದ್ದಾರೆ. ಬಿಜೆಪಿ ಮಧ್ಯಪ್ರದೇಶದ ಅಮರವಾರ ಕ್ಷೇತ್ರದಲ್ಲಿ ಗೆದ್ದುಕೊಂಡಿದೆ.