ಬೆಂಗಳೂರು: ರಾಜ್ಯದಲ್ಲಿನ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿದೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಟಿಕೆಟ್ ಗಾಗಿ ಲಾಬಿ ನಡೆಸಿದ್ದರು. ಈ ಮಧ್ಯೆ ಬಿಜೆಪಿ ಎರಡು ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿದೆ.
ಭರತ್ ಬೊಮ್ಮಾಯಿಗೆ ಶಿಗ್ಗಾಂವಿ ಹಾಗೂ ಬಂಗಾರು ಹನುಮಂತುಗೆ ಸಂಡೂರು ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್ ಘೋಷಣೆ ಮಾಡಿದೆ. ಆದರೆ ಚನ್ನಪಟ್ಟಣಕ್ಕೆ ಅಭ್ಯರ್ಥಿ ಹೆಸರನ್ನು ಇನ್ನೂ ಘೋಷಣೆ ಮಾಡಿಲ್ಲ.
ಶಿಗ್ಗಾಂವಿಯಲ್ಲಿ ಬಸವರಾಜ ಬೊಮ್ಮಾಯಿ ಅವರು ಶಾಸಕರಾಗಿದ್ದರು. ಅವರು ಸಂಸದರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಆ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆ ಆಗಿದೆ. ಆದರೆ ಟಿಕೆಟ್ ಯಾರಿಗೆ ಎಂಬುವುದು ಸಾಕಷ್ಟು ಕುತೂಹಲಕ್ಕೆ ಮೂಡಿಸಿತ್ತು. ಸದ್ಯ ಅವರ ಪುತ್ರ ಭರತ್ ಬೊಮ್ಮಾಯಿಗೆ ಟಿಕೆಟ್ ನೀಡಲಾಗಿದೆ.
ಟಿಕೆಟ್ ವಿಚಾರವಾಗಿ ಬಸವರಾಜ ಬೊಮ್ಮಾಯಿ ಹೈಕಮಾಂಡ್ ನಾಯಕರುಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಅಲ್ಲದೇ, ಇತ್ತೀಚೆಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಕೂಡ ಚರ್ಚೆ ನಡೆಸಿದ್ದರು. ಶನಿವಾರ ದೆಹಲಿಯಲ್ಲಿ ಮಾತನಾಡಿದ್ದ ಬೊಮ್ಮಾಯಿ ಅವರು ಭರತ್ ಬೊಮ್ಮಾಯಿಗೆ ಟಿಕೆಟ್ ಬೇಡ ಎಂಬ ಅರ್ಥದಲ್ಲೇ ಮಾತನಾಡಿದ್ದರು. ಆದರೆ ಇದೀಗ ಅವರಿಗೆ ಟಿಕೆಟ್ ನೀಡಲಾಗಿದೆ.
ಭರತ್ ಬೊಮ್ಮಾಯಿಗೆ ಟಿಕೆಟ್ ಕೊಡುವ ವಿಚಾರವಾಗಿ ಬಿಜೆಪಿಯಲ್ಲಿ ಅಪಸ್ವರ ಇತ್ತು. ಅಪ್ಪ – ಮಕ್ಕಳಿಗೆ ಟಿಕೆಟ್ ಕೊಟ್ಟರೆ ಹೇಗೆ ಎಂಬು ಬಿಜೆಪಿಯ ನಾಯಕರೇ ಪ್ರಶ್ನೆ ಮಾಡಿದ್ದರು. ಆದರೆ ಇದೀಗ ಭರತ್ ಬೊಮ್ಮಾಯಿಗೆ ಟಿಕೆಟ್ ನೀಡಲಾಗಿದೆ. ಆದರೆ, ಶಿಗ್ಗಾಂವಿ ಕ್ಷೇತ್ರದಲ್ಲಿ ಬೊಮ್ಮಾಯಿ ಕುಟುಂಬ ಬಿಟ್ಟು ಬೇರೆಯವರಿಗೆ ಟಿಕೆಟ್ ನೀಡಿದ್ದರೆ, ಬಿಜೆಪಿಗೆ ಗೆಲುವು ತುಂಬಾ ಕಷ್ಟವಾಗುತ್ತಿತ್ತು. ಹೀಗಾಗಿ ಬಿಜೆಪಿ ಈ ತಂತ್ರ ಹೂಡಿದೆ. ಸದ್ಯ ಬೊಮ್ಮಾಯಿ ಕುಟುಂಬಕ್ಕೆ ಟಿಕೆಟ್ ನೀಡಿದ್ದು, ಶಿಗ್ಗಾಂವಿ ಬಹುತೇಕ ಬಿಜೆಪಿ ತೆಕ್ಕೆಗೆ ಬೀಳಲಿದೆ ಎಂಬ ಮಾತುಗಳು ಕೂಡ ಆ ಕ್ಷೇತ್ರದಲ್ಲಿ ಕೇಳಿ ಬರುತ್ತಿವೆ.
ಚನ್ನಪಟ್ಟಣಕ್ಕೆ ಅಭ್ಯರ್ಥಿ ಘೋಷಣೆ ಮಾಡದಿರುವುದು ಅನುಮಾನಕ್ಕೆ ದಾರಿ ಮಾಡಿ ಕೊಟ್ಟಿದೆ. ಬಿಜೆಪಿ ಮತ್ತು ಜೆಡಿಎಸ್ ನಡುವಿನ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಈ ಕ್ಷೇತ್ರದ ಟಿಕೆಟ್ ಘೋಷಣೆ ಆಗಿಲ್ಲ. ಸಿಪಿ ಯೋಗೇಶ್ವರ್ ಹಾಗೂ ನಿಖಿಲ್ ಕುಮಾರಸ್ವಾಮಿ ಹೆಸರು ಇಲ್ಲಿ ಕೇಳಿ ಬರುತ್ತಿದೆ. ಬಿಜೆಪಿ ಮತ್ತು ಜೆಡಿಎಸ್ ನಾಯಕರು ಚರ್ಚೆ ಮಾಡಿ ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.
ರಾಜ್ಯದ ಚನ್ನಪಟ್ಟಣ, ಸಂಡೂರು ಮತ್ತು ಶಿಗ್ಗಾಂವಿ ವಿಧಾನಸಭೆ ಕ್ಷೇತ್ರಗಳಿಗೆ ಈ ಬಾರಿ ಉಪ ಚುನಾವಣೆ ನಡೆಯಲಿದೆ. ನವೆಂಬರ್ 13ರಂದು ಚುನಾವಣೆ ನಡೆಯಲಿದೆ. ನವೆಂಬರ್ 23ರಂದು ಚುನಾವಣೆ ಘೋಷಣೆಯಾಗಲಿದೆ. ನಾಮಪತ್ರ ಸಲ್ಲಿಕೆಗೆ ಅಕ್ಟೋಬರ್ 25ರಂದು ಕೊನೆಯ ದಿನವಾಗಿದೆ. ಅಕ್ಟೋಬರ್ 28ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಾಸ್ ಪಡೆಯಲು ಅಕ್ಟೋಬರ್ 30 ಕೊನೆಯ ದಿನವಾಗಿದೆ.