ಸಣ್ಣ ವ್ಯಾಪಾರಿಗಳಿಗೆ ಕಮರ್ಷಿಯಲ್ ಟ್ಯಾಕ್ಸ್ ಅಧಿಕಾರಿಗಳು ನೋಟಿಸ್ ನೀಡುತ್ತಿರುವ ಹಿನ್ನೆಲೆಯಲ್ಲಿ ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇತ್ತೀಚೆಗೆ ನೋಟಿಸ್ ನೀಡುತ್ತಿರುವ ವಿಚಾರ ರಾಜ್ಯದಲ್ಲಿ ದೊಡ್ಡ ಸದ್ದು ಮಾಡುತ್ತಿದ್ದು, ಸಣ್ಣ ವ್ಯಾಪಾರಸ್ಥರು ಅಧಿಕಾರಿಗಳ ನೋಟಿಸ್ ಸುದ್ದಿ ಕೇಳಿ ಬೆಚ್ಚಿ ಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಾಪ್ ಶೆಟ್ಟಿ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಬೇಕರಿ ಕಾಂಡಿಮೆಂಟ್ ಹಾಗೂ ಸಣ್ಣ ಉದ್ದಿಮೆದಾರರ ಒಕ್ಕೂಟ ವತಿಯಿಂದ ಸರ್ವ ಸಂಘಟನೆಗಳ ಮುಖಂಡರ ಸಮನ್ವಯ ಸಭೆ ಕರೆಯಲಾಗಿತ್ತು. ಕರ್ನಾಟಕ ರಕ್ಷಣ ವೇದಿಕೆಯ ಮುಖಂಡ ಶಿವಣ್ಣ, ಜೈ ಕರ್ನಾಟಕ ಬೆಂಗಳೂರು ನಗರ ಘಟಕದ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಒಕ್ಕೂಟದ ಅಧ್ಯಕ್ಷ ಪ್ರತಾಪ್ ಶೆಟ್ಟಿ, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರವೀಂದ್ರ ಶೆಟ್ಟಿ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಈ ವೇಳೆ ವ್ಯಾಪಾರಸ್ಥರು ಯಾವುದೇ ಕಾರಣಕ್ಕೆ ಭಯ ಪಡಬಾರದು. ಕೂಡಲೇ ಸರ್ಕಾರ ಪ್ರವೇಶಿಸಿ ಈ ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಲಾಯಿತು. ಸರ್ಕಾರ ಈ ಕುರಿತು ನಿರ್ಲಕ್ಷ್ಯ ವಹಿಸಿದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು.



















