ಉಡುಪಿ : ಉದ್ಯಮಿ ಸುದೀಪ್ ರೈ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಟ್ವಿಸ್ಟ್ ಸಿಕ್ಕಿದ್ದು, ಸುದೀಪ್ ರೈ ಪತ್ನಿ ಸೌಮ್ಯಳನ್ನು ಪೊಲೀಸರು ಬಂಧಿಸಿದ್ದಾರೆ.
ಸುದೀಪ್ ರೈ ಅವರ ತಂದೆ ದಾಮೋದರ ಶೆಟ್ಟಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ಪ್ರಾಥಮಿಕ ತನಿಖೆಯಲ್ಲಿ ಆರೋಪ ಸಾಬೀತಾದ ಹಿನ್ನೆಲೆ ಕಾರ್ಕಳದಲ್ಲಿ ಸೌಮ್ಯ ಶೆಟ್ಟಿಯನ್ನು ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಬಂಧಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಸುದೀಪ್ ರೈ (ನೆಲ್ಯಾಡಿ, ದಕ್ಷಿಣ ಕನ್ನಡ) ಹಾಗೂ ಕಾರ್ಕಳದ ಸೌಮ್ಯ ಶೆಟ್ಟಿ ಫೆಬ್ರವರಿ 17ರಂದು ಪ್ರೀತಿಸಿ ಮದುವೆಯಾಗಿದ್ದರು. ಮದುವೆಯ ಬಳಿಕ ಸುದೀಪ್, ಪತ್ನಿಯ ಮನೆಯಾದ ಬಂಗ್ಲೆಗುಡ್ಡೆಯಲ್ಲಿ ವಾಸವಾಗಿದ್ದರು. ಮಾರ್ಚ್ 17ರಂದು ತಾಯಿಯೊಂದಿಗೆ ಕಾರಿನಲ್ಲಿ ತೆರಳುತ್ತಿದ್ದ ಸುದೀಪ್ ರೈ ಅವರ ವಾಹನವನ್ನು ಸೌಮ್ಯ ಅಡ್ಡಗಟ್ಟಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾಳೆಂದು ಅತ್ತೆ-ಮಾವ ಆರೋಪಿಸಿದ್ದಾರೆ.
ಮಾರ್ಚ್ 22ರಂದು ಸುದೀಪ್ ವಿಷ ಸೇವಿಸಿದ್ದಾಗಿ ಸೌಮ್ಯ ಸಂಬಂಧಿಕರಿಗೆ ಮಾಹಿತಿ ನೀಡಿದ್ದು, ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 29ರಂದು ಸುದೀಪ್ ಮೃತಪಟ್ಟಿದ್ದಾರೆ. ಪತ್ನಿ ಮಾನಸಿಕ ಹಿಂಸೆ ನೀಡಿ ಆತ್ಮಹತ್ಯೆಗೆ ಪ್ರಚೋದಿಸಿರುವುದೇ ಕಾರಣ ಎಂದು ದಾಮೋದರ ಶೆಟ್ಟಿ ದೂರು ನೀಡಿದ್ದರು. ಕಾರ್ಕಳ ನಗರ ಪೊಲೀಸ್ ಠಾಣೆಯ ಪ್ರಭಾರ ನಿರೀಕ್ಷಕ ಮಂಜಪ್ಪ ನೇತೃತ್ವದಲ್ಲಿ ನಡೆದ ತನಿಖೆಯಲ್ಲಿ ಸಾಕ್ಷ್ಯಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.
ವಿಚಾರಣೆಯಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸೌಮ್ಯ ಶೆಟ್ಟಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣ ಮುಂದಿನ ತನಿಖೆಯಲ್ಲಿದೆ.
ಇದನ್ನೂ ಓದಿ : ಥೆರಪಿಸ್ಟ್ ಕೊಲೆ ಪ್ರಕರಣದಲ್ಲಿ ರೋಚಕ ಟ್ವಿಸ್ಟ್.. ಬಾಯ್‌ಫ್ರೆಂಡ್ ಜೊತೆ ಸೇರಿ ಪತಿಯನ್ನೇ ಹತ್ಯೆಗೈದ ಪತ್ನಿ



















