ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಅಮೋಘ ಜಯ ಸಾಧಿಸಿದೆ. ಪಂದ್ಯ ಗೆಲ್ಲುತ್ತಿದ್ದಂತೆ ನಾಯಕ ಬುಮ್ರಾ ಅವರು ವಿರಾಟ್ ಕೊಹ್ಲಿಯನ್ನು ಹಾಡಿ ಹೊಗಳಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಭಾರತ ತಂಡ ಮೊದಲ ಇನಿಂಗ್ಸ್ ನಲ್ಲಿ 150 ರನ್ ಗಳಿಗೆ ಆಲೌಟ್ ಆಗಿತ್ತು. ನಂತರ ಮೊದಲ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಭಾರತೀಯ ಬೌಲರ್ ಗಳ ಎದುರು ಪ್ರತಿರೋಧ ಒಡ್ಡಲು ವಿಫಲರಾದರು. ಹೀಗಾಗಿ ಕೇವಲ 104 ರನ್ ಗಳಿಗೆ ಆಲೌಟ್ ಆದರು.
ಎರಡನೇ ಇನಿಂಗ್ಸ್ ನಲ್ಲಿ ಭಾರತದ ಪರ ಯಶಸ್ವಿ ಜೈಸ್ವಾಲ್ (161) ಹಾಗೂ ವಿರಾಟ್ ಕೊಹ್ಲಿ (100) ಶತಕ ಸಿಡಿಸಿ ಮಿಂಚಿದ್ದರು. ಈ ಶತಕಗಳ ನೆರವಿನಿಂದ ಭಾರತ ತಂಡವು 6 ವಿಕೆಟ್ ಕಳೆದುಕೊಂಡು 487 ರನ್ ಗಳಿಸಿ ದ್ವಿತೀಯ ಇನಿಂಗ್ಸ್ ನಲ್ಲಿ ಡಿಕ್ಲೇರ್ ಘೋಷಿಸಲಾಯಿತು.
ಮೊದಲ ಇನಿಂಗ್ಸ್ನಲ್ಲಿನ 46 ರನ್ಗಳ ಹಿನ್ನಡೆಯೊಂದಿಗೆ 534 ರನ್ಗಳ ಗುರಿ ಪಡೆದ ಆಸ್ಟ್ರೇಲಿಯಾ ತಂಡವು 238 ರನ್ ಗಳಿಗೆ ಸರ್ವಪತನವಾಯಿತು. ಹೀಗಾಗಿ ಭಾರತ ತಂಡವು 295 ರನ್ಗಳ ಐತಿಹಾಸಿಕ ಜಯ ದಾಖಲಿಸಿತು.
ಗೆಲುವಿನ ನಂತರ ಮಾತನಾಡಿದ ನಾಯಕ ಜಸ್ಪ್ರೀತ್ ಬುಮ್ರಾ, ತಂಡದ ಪ್ರದರ್ಶನದ ಬಗ್ಗೆ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಯಶಸ್ವಿ ಜೈಸ್ವಾಲ್ ಹಾಗೂ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ನ್ನು ಹಾಡಿ ಹೊಗಳಿದ್ದಾರೆ. ಯಶಸ್ವಿ ಜೈಸ್ವಾಲ್ ಆಡಿರುವ ಇನಿಂಗ್ಸ್ ಅವರ ಇದುವರೆಗಿನ ಅತ್ಯುತ್ತಮ ಟೆಸ್ಟ್ ಇನ್ನಿಂಗ್ಸ್ ಆಗಿದೆ. ಜೈಸ್ವಾಲ್ ಆಕ್ರಮಣಕಾರಿ ಬ್ಯಾಟಿಂಗ್ಗೆ ಒತ್ತು ನೀಡುತ್ತಾರೆ. ಆದರೆ ಈ ಬಾರಿ ಪರಿಸ್ಥಿತಿಗೆ ತಕ್ಕಂತೆ ಅದ್ಭುತವಾಗಿ ಇನಿಂಗ್ಸ್ ಕಟ್ಟಿದರು. ನಾನು ಯಾವತ್ತೂ ವಿರಾಟ್ ಔಟ್ ಆಫ್ ಫಾರ್ಮ್ ನಲ್ಲಿ ಇರುವುದನ್ನು ನೋಡಿಲ್ಲ. ಅವರು ಕಷ್ಟಕರವಾದ ಪಿಚ್ ಗಳಲ್ಲಿ ಕೆಲವೊಮ್ಮೆ ಬೇಗೆನೆ ಔಟಾಗಿರಬಹುದು. ಹೀಗಾಗಿ ಅವರ ಫಾರ್ಮ್ ನಿರ್ಣಯಿಸುವುದು ಕಷ್ಟ ಎಂದಿದ್ದಾರೆ.