ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಬುಮ್ರಾ ಉತ್ತಮ ಬೌಲಿಂಗ್ ಮಾಡಿ ದಾಖಲೆ ಬರೆದಿದ್ದಾರೆ.
ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಕೇವಲ 150 ರನ್ ಗಳಿಗೆ ಆಲೌಟ್ ಆಯಿತು. ನಂತರ ಮೊದಲ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯ ತಂಡ ಕೂಡ ಬುಮ್ರಾ ದಾಳಿಗೆ ನಲುಗಿತು. ಮೊದಲ ದಿನದ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 67 ರನ್ ಗಳಿಸಿದೆ. ಈ ಮೂಲಕ ಆಸ್ಟ್ರೇಲಿಯಾ ಇನ್ನೂ 83 ರನ್ ಗಳ ಹಿನ್ನಡೆ ಅನುಭವಿಸಿದೆ.
ಈ ಪಂದ್ಯದಲ್ಲಿ ಬುಮ್ರಾ ನಾಯಕತ್ವದ ಜೊತೆಗೆ ಬೌಲಿಂಗ್ ವಿಭಾಗವನ್ನು ಸಮರ್ಥವಾಗಿ ಮುನ್ನಡೆಸಿದ್ದಾರೆ. ಮೊದಲ ದಿನ 10 ಓವರ್‌ಗಳಲ್ಲಿ ಕೇವಲ 17 ರನ್ ನೀಡಿ 4 ವಿಕೆಟ್ ಪಡೆದಿದ್ದಾರೆ. ಈ ಮೂಲಕ ಬುಮ್ರಾ, ಆಸ್ಟ್ರೇಲಿಯಾದಲ್ಲಿ ಅತಿ ಹೆಚ್ಚು ಟೆಸ್ಟ್ ವಿಕೆಟ್‌ಗಳನ್ನು ಪಡೆದ ಭಾರತದ ಬೌಲರ್ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಅಲಂಕರಿಸಿದ್ದಾರೆ. ಬುಮ್ರಾ ಆಸ್ಟ್ರೇಲಿಯಾ ನೆಲದಲ್ಲಿ ಎಂಟನೇ ಟೆಸ್ಟ್ ಆಡುತ್ತಿದ್ದು ಇಲ್ಲಿಯವರೆಗೆ 35 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
ಈ ಮೂಲಕ ಆಸ್ಟ್ರೇಲಿಯಾದಲ್ಲಿ 35 ಟೆಸ್ಟ್ ವಿಕೆಟ್‌ಗಳನ್ನು ಪಡೆದ ಮಾಜಿ ಸ್ಪಿನ್ನರ್ ಬಿಷನ್ ಸಿಂಗ್ ಬೇಡಿ ಅವರ ದಾಖಲೆಯನ್ನು ಮುರಿದಿದ್ದಾರೆ. ಈ ಪಟ್ಟಿಯಲ್ಲಿ ಕಪಿಲ್ ದೇವ್ (51 ವಿಕೆಟ್), ಅನಿಲ್ ಕುಂಬ್ಳೆ (49 ವಿಕೆಟ್) ಮತ್ತು ರವಿಚಂದ್ರನ್ ಅಶ್ವಿನ್ (39 ವಿಕೆಟ್) ಪಡೆದು ಕ್ರಮವಾಗಿ ಒಂದರಿಂದ ಮೂರನೇ ಸ್ಥಾನದಲ್ಲಿದ್ದಾರೆ.
ಆಸೀಸ್ ಬ್ಯಾಟಿಂಗ್ ವಿಭಾಗದ ಮೊದಲ 3 ವಿಕೆಟ್ ಗಳನ್ನು ಉರುಳಿಸಿದ ಜಸ್ಪ್ರೀತ್ ತಮ್ಮ ಹೆಸರಿನಲ್ಲಿ ದೊಡ್ಡ ದಾಖಲೆ ಬರೆದಿದ್ದು, ಡೇಲ್ ಸ್ಟೇನ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಬುಮ್ರಾ, ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಅವರನ್ನು ಗೋಲ್ಡನ್ ಡಕ್ ಗೆ ಔಟ್ ಮಾಡಿದರು. ಈ ಮೂಲಕ ಈ ಸಾಧನೆ ಮಾಡಿದ ವಿಶ್ವದ ಎರಡನೇ ಬೌಲರ್ ಎನಿಸಿಕೊಂಡಿದ್ದಾರೆ.