ಭಾರತೀಯ ಕ್ರಿಕೆಟ್ ತಂಡದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಈ ಮೂಲಕ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ.
ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಬುಮ್ರಾ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಸಹಜವಾಗಿ ಟೆಸ್ಟ್ ಬೌಲಿಂಗ್ ಶ್ರೇಯಾಂಕದಲ್ಲಿ ಮುಂಬಡ್ತಿ ಪಡೆದು ನಂ. 1 ಸ್ಥಾನದಲ್ಲಿದ್ದಾರೆ. ಸದ್ಯ ಐಸಿಸಿ 2025 ರ ಮೊದಲ ರ್ಯಾಂಕಿಂಗ್ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ಜಸ್ಪ್ರೀತ್ ಬುಮ್ರಾ ಯಾವುದೇ ಭಾರತೀಯ ಬೌಲರ್ ಮಾಡದ ಸಾಧನೆ ಮಾಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಬುಮ್ರಾ 9 ವಿಕೆಟ್ ಪಡೆದಿದ್ದು, ಐಸಿಸಿ ಟೆಸ್ಟ್ ಬೌಲರ್ಗಳ ಶ್ರೇಯಾಂಕದಲ್ಲಿ ಅಗ್ರ ಸ್ಥಾನ ಉಳಿಸಿಕೊಂಡಿದ್ದಾರೆ. ಅಲ್ಲದೇ, 907 ರೇಟಿಂಗ್ ಪಾಯಿಂಟ್ ಗಳನ್ನು ಪಡೆದಿರುವ ಬುಮ್ರಾ ಐಸಿಸಿ ಶ್ರೇಯಾಂಕದ ಇತಿಹಾಸದಲ್ಲಿ ಇಷ್ಟು ರೇಟಿಂಗ್ ಪಾಯಿಂಟ್ ಪಡೆದ ಭಾರತದ ಮೊದಲ ಟೆಸ್ಟ್ ಬೌಲರ್ ಎನಿಸಿಕೊಂಡಿದ್ದಾರೆ.
ಜಸ್ಪ್ರೀತ್ ಬುಮ್ರಾ ಮೊದಲು, ಆರ್ ಅಶ್ವಿನ್ ಐಸಿಸಿ ಶ್ರೇಯಾಂಕದ ಇತಿಹಾಸದಲ್ಲಿ ಅತಿ ಹೆಚ್ಚು ರೇಟಿಂಗ್ ಪಾಯಿಂಟ್ ಪಡೆದ ಭಾರತದ ಟೆಸ್ಟ್ ಬೌಲರ್ ಆಗಿದ್ದರು. ಈಗ ಅಶ್ವಿನ್ ರನ್ನು ಹಿಂದಿಕ್ಕಿ ಬುಮ್ರಾ ನಂ. 1 ಸ್ಥಾನ ತಲುಪಿದ್ದಾರೆ.
ಅಶ್ವಿನ್ ಡಿಸೆಂಬರ್ 2016 ರಲ್ಲಿ 904 ರೇಟಿಂಗ್ ಪಾಯಿಂಟ್‌ಗಳನ್ನು ಪಡೆದುಕೊಳ್ಳುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತದ ಬೌಲರ್ ಎನಿಸಿಕೊಂಡಿದ್ದರು. ಈಗ 907 ರೇಟಿಂಗ್ ಪಾಯಿಂಟ್ ಪಡೆಯುವುದರ ಮೂಲಕ ಬುಮ್ರಾ, ಅಶ್ವಿನ್ ರ ದಾಖಲೆಯನ್ನು ಪುಡಿಗಟ್ಟಿದ್ದಾರೆ.