ನವದೆಹಲಿ: ಒಂದೆಡೆ ಜನಸಾಮಾನ್ಯರಿಗೆ ದೀಪಾವಳಿಯ ಬಂಪರ್ ಘೋಷಿಸುವ ಭರವಸೆ ನೀಡಿದ ಪ್ರಧಾನಿ ಮೋದಿಯವರು, ಮತ್ತೊಂದೆಡೆ ದೇಶದ ಯುವಜನರಿಗೂ ಸಿಹಿ ಸುದ್ದಿ ನೀಡಿದ್ದಾರೆ.
ಶುಕ್ರವಾರ ದೇಶದ 79ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಕೆಂಪುಕೋಟೆಯಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ಹೊಸದಾಗಿ ಖಾಸಗಿ ಕ್ಷೇತ್ರದಲ್ಲಿ ಕೆಲಸಕ್ಕೆ ಸೇರುವ ಯುವಕರಿಗೆ 15,000 ರೂ. ಆರ್ಥಿಕ ನೀಡುವ ‘ಪ್ರಧಾನ ಮಂತ್ರಿ ವಿಕಸಿತ ಭಾರತ ರೋಜ್‌ಗಾರ್ ಯೋಜನೆ’ಯನ್ನು ತಕ್ಷಣದಿಂದಲೇ ಜಾರಿಗೆ ತರುವುದಾಗಿ ಘೋಷಿಸಿದ್ದಾರೆ.
ಒಟ್ಟು 1 ಲಕ್ಷ ಕೋಟಿ ರೂ. ವೆಚ್ಚದ ಈ ಯೋಜನೆಯು 3.5 ಕೋಟಿಗೂ ಹೆಚ್ಚು ಯುವಜನರಿಗೆ ಪ್ರಯೋಜನ ನೀಡಲಿದೆ ಎಂದು ಅವರು ಹೇಳಿದ್ದಾರೆ. ಕಳೆದ ತಿಂಗಳು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಪ್ರಕಟಿಸಿದಂತೆ, ಈ ಯೋಜನೆಯು ಮುಂದಿನ ಎರಡು ವರ್ಷಗಳಲ್ಲಿ 3.5 ಕೋಟಿ ಉದ್ಯೋಗ ಸೃಷ್ಟಿಗೆ ಪ್ರೋತ್ಸಾಹ ನೀಡುವ ಗುರಿ ಹೊಂದಿದೆ. ಇದರಲ್ಲಿ ಸುಮಾರು 1.92 ಕೋಟಿ ಫಲಾನುಭವಿಗಳು ಮೊದಲ ಬಾರಿಗೆ ಕೆಲಸಕ್ಕೆ ಸೇರುವವರಾಗಿರುತ್ತಾರೆ.
ಯೋಜನೆಗೆ ಯಾರು ಅರ್ಹರು?
ಈ ಯೋಜನೆಯು ಎರಡು ಪ್ರಮುಖ ಭಾಗಗಳನ್ನು ಒಳಗೊಂಡಿದೆ:
ಭಾಗ 1: ಮೊದಲ ಬಾರಿ ಉದ್ಯೋಗಕ್ಕೆ ಸೇರುವವರಿಗೆ ಪ್ರೋತ್ಸಾಹ
15,000 ರೂ. ನಗದು: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ)ಗೆ ನೋಂದಾಯಿಸಿಕೊಳ್ಳುವ ಹೊಸ ನೌಕರರು ಈ ಸೌಲಭ್ಯ ಪಡೆಯುತ್ತಾರೆ.
ಪಾವತಿ ಹೇಗೆ?: ಒಟ್ಟು 15,000ರೂ.ಗಳನ್ನು ಎರಡು ಕಂತುಗಳಲ್ಲಿ ನೀಡಲಾಗುತ್ತದೆ. ಮೊದಲ ಕಂತನ್ನು ಆರು ತಿಂಗಳ ಸೇವೆ ಪೂರ್ಣಗೊಂಡ ನಂತರ ಮತ್ತು ಎರಡನೇ ಕಂತನ್ನು ಒಂದು ವರ್ಷದ ಸೇವೆ ಹಾಗೂ ಆರ್ಥಿಕ ಸಾಕ್ಷರತಾ ಕಾರ್ಯಕ್ರಮ ಪೂರ್ಣಗೊಳಿಸಿದ ನಂತರ ನೀಡಲಾಗುತ್ತದೆ.
ಅರ್ಹತಾ ಮಾನದಂಡ: ತಿಂಗಳಿಗೆ 1 ಲಕ್ಷ ರೂ.ವರೆಗೆ ವೇತನ ಹೊಂದಿರುವ ಉದ್ಯೋಗಿಗಳು ಈ ಸೌಲಭ್ಯಕ್ಕೆ ಅರ್ಹರಾಗಿದ್ದಾರೆ.
ಹಣ ಉಳಿತಾಯಕ್ಕೆ ಪ್ರೋತ್ಸಾಹ: ಈ ಪ್ರೋತ್ಸಾಹಧನದ ಸ್ವಲ್ಪ ಭಾಗವನ್ನು ಒಂದು ನಿರ್ದಿಷ್ಟ ಅವಧಿಗೆ ಉಳಿತಾಯ ಖಾತೆ ಅಥವಾ ಠೇವಣಿಯಲ್ಲಿ ಇಡಲಾಗುತ್ತದೆ. ಉದ್ಯೋಗಿಗಳು ನಂತರ ಅದನ್ನು ಹಿಂಪಡೆಯಬಹುದು.
ಡಿಬಿಟಿ ಪಾವತಿ: ಈ ಹಣವು ಆಧಾರ್ ಆಧಾರಿತ ಪಾವತಿ ವ್ಯವಸ್ಥೆ (ABPS) ಮೂಲಕ ನೇರ ಖಾತೆಗೆ ವರ್ಗಾವಣೆ (DBT) ರೂಪದಲ್ಲಿ ನೌಕರರ ಖಾತೆಗೆ ಜಮೆಯಾಗಲಿದೆ.
ಭಾಗ 2: ಉದ್ಯೋಗದಾತರಿಗೆ ನೆರವು
ಕೈಗಾರಿಕೆಗಳಿಗೆ ವಿಶೇಷ ಆದ್ಯತೆ: ಈ ಭಾಗವು ಹೆಚ್ಚುವರಿ ಉದ್ಯೋಗ ಸೃಷ್ಟಿ ಮಾಡುವ ಎಲ್ಲಾ ವಲಯಗಳಿಗೂ ಅನ್ವಯವಾಗುತ್ತದೆ. ಆದರೆ, ಉತ್ಪಾದನಾ ವಲಯಕ್ಕೆ ವಿಶೇಷ ಒತ್ತು ನೀಡಲಾಗಿದೆ.
ಉದ್ಯೋಗದಾತರಿಗೆ ಪ್ರೋತ್ಸಾಹಧನ: ಉದ್ಯೋಗದಾತರು ಪ್ರತಿ ಹೊಸ ನೌಕರನಿಗೆ ತಿಂಗಳಿಗೆ 3,000 ರೂ.ವರೆಗೆ ಪ್ರೋತ್ಸಾಹಧನ ಪಡೆಯುತ್ತಾರೆ. ಈ ಸೌಲಭ್ಯವನ್ನು 2 ವರ್ಷಗಳವರೆಗೆ ನೀಡಲಾಗುತ್ತದೆ.
ಉತ್ಪಾದನಾ ವಲಯಕ್ಕೆ ವಿಸ್ತರಣೆ: ಉತ್ಪಾದನಾ ವಲಯದ ಉದ್ಯೋಗದಾತರಿಗೆ ಈ ಪ್ರೋತ್ಸಾಹಧನವನ್ನು ಮೂರನೇ ಮತ್ತು ನಾಲ್ಕನೇ ವರ್ಷಕ್ಕೂ ವಿಸ್ತರಿಸಲಾಗುತ್ತದೆ.
ಅರ್ಹತಾ ಮಾನದಂಡ: 50ಕ್ಕಿಂತ ಕಡಿಮೆ ನೌಕರರಿರುವ ಸಂಸ್ಥೆಗಳು ಕನಿಷ್ಠ ಇಬ್ಬರು ಹೊಸ ನೌಕರರನ್ನು ಮತ್ತು 50ಕ್ಕಿಂತ ಹೆಚ್ಚು ನೌಕರರಿರುವ ಸಂಸ್ಥೆಗಳು ಕನಿಷ್ಠ 5 ಹೊಸ ನೌಕರರನ್ನು ಆರು ತಿಂಗಳಿಗಿಂತ ಹೆಚ್ಚು ಕಾಲ ಉಳಿಸಿಕೊಳ್ಳಬೇಕು.
ಈ ಯೋಜನೆಯು ‘ವಿಕಸಿತ ಭಾರತ’ದ ಗುರಿಗಳನ್ನು ಸಾಧಿಸುವತ್ತ ಒಂದು ಮಹತ್ವದ ಹೆಜ್ಜೆಯಾಗಿದ್ದು, ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸರ್ಕಾರ ಬದ್ಧವಾಗಿದೆ ಎಂಬುದನ್ನು ತೋರಿಸುತ್ತದೆ ಎಂದು ಸಚಿವಾಲಯ ತಿಳಿಸಿದೆ. ಈ ಮಹತ್ವಾಕಾಂಕ್ಷೆಯ ಯೋಜನೆಯು ದೇಶದ ಯುವಜನತೆಯಲ್ಲಿ ಹೊಸ ಭರವಸೆ ಮೂಡಿಸಿದೆ.