ವಿಶಾಖಪಟ್ಟಣಂ : ಇದೇ ಮೊದಲ ಬಾರಿ ಪರಿಚಯಿಸಲಾಗಿರುವ ಟೈಬ್ರೇಕರ್‌ನಲ್ಲಿ ಒತ್ತಡವನ್ನು ನಿಭಾಯಿಸುವಲ್ಲಿ ವಿಫಲಗೊಂಡ ಬೆಂಗಳೂರು ಬುಲ್ಸ್ ತಂಡ 4-6 ಅಂಕಗಳಿಂದ ಪುಣೇರಿ ಪಲ್ಟನ್ ತಂಡದ ವಿರುದ್ಧ ವೀರೋಚಿತ ಸೋಲನುಭವಿಸಿತು.
ಇಲ್ಲಿ ವಿಶ್ವನಾಥ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ದಿನದ ಎರಡನೇ ಪಂದ್ಯದ ನಿಗದಿತ ಅವಧಿಯಲ್ಲಿ ಉಭಯ ತಂಡಗಳು 32-32ರಲ್ಲಿ ಸಮಬಲದ ಹೋರಾಟ ನೀಡಿದವು. ಫಲಿತಾಂಶಕ್ಕಾಗಿ ನಡೆದ ಟೈಬ್ರೇಕರ್‌ನಲ್ಲಿ ಪುಣೇರಿ 6-4ರಲ್ಲಿ ಮೇಲುಗೈ ಸಾಧಿಸಿತು. ಇದಕ್ಕೂ ಮುನ್ನ ಕೊನೆಯ ಕ್ಷ ಣದಲ್ಲಿ32-31ರಲ್ಲಿ ಮುನ್ನಡೆಯಲ್ಲಿದ್ದ ಬುಲ್ಸ್ ಟ್ಯಾಕಲ್ ವೇಳೆ ಎಸಗಿದ ಪ್ರಮಾದಗಳಿಂದಾಗಿ ಗೆಲ್ಲುವ ಅವಕಾಶದಿಂದ ವಂಚಿತವಾಯಿತು. ಹೀಗಾಗಿ ಇತ್ತಂಡಗಳು ನಿಗದಿತ ಅವಧಿಗೆ 32-32ರಲ್ಲಿಸಮಬಲದ ಹೋರಾಟ ನೀಡಿದ ಪರಿಣಾಮ ಪಂದ್ಯ ಟೈ ಬ್ರೇಕರ್‌ಗೆ ಹೋಯಿತು. ಪಂದ್ಯದ ನಿಗದಿತ ಅವಧಿಯಲ್ಲಿಬೆಂಗಳೂರು ಬುಲ್ಸ್ ತಂಡದ ಪರ ಆಕಾಶ್ ಶಿಂದೆ (12 ಅಂಕ) ಮತ್ತು ಆಶೀಶ್ ಮಲಿಕ್(8 ಅಂಕ) ಮಿಂಚಿದರೆ, ಪುಣೇರಿ ಪಲ್ಟನ್ ತಂಡದ ಪರ ಆದಿತ್ಯ ಶಿಂದೆ (9 ಅಂಕ), ಪಂಕಜ್ ಮೋಹಿತೆ(6 ಅಂಕ) ಮತ್ತು ನಾಯಕ ಅಸ್ಲಾಮ್ ಇನಾಮ್ದಾರ್(5 ಅಂಕ) ಪ್ರೇಕ್ಷ ಕರನ್ನು ಸೆಳೆದರು.
32ನೇ ನಿಮಿಷದಲ್ಲಿಬುಲ್ಸ್ ಮತ್ತು ಪಲ್ಟನ್ 26-25 ಅಂಕಗಳಿಂದ ಹೋರಾಟ ಪ್ರದರ್ಶಿಸಿದವು. ಇದರ ಬೆನ್ನಲ್ಲೇ ಬುಲ್ಸ್ ಪಂದ್ಯದಲ್ಲಿ ಮೊದಲ ಬಾರಿ ಆಲೌಟ್‌ಗೆ ಗುರಿಯಾಯಿತು. ಹೀಗಾಗಿ 27-28ರಲ್ಲಿ ಹಿನ್ನಡೆ ಕಾಣಬೇಕಾಯಿತು. ಇದರ ಲಾಭ ಪಡೆದ ಪುಣೇರಿ ತಂಡದ ಮುನ್ನಡೆಯನ್ನು 30-27ಕ್ಕೆ ವಿಸ್ತರಿಸಿಕೊಂಡಿತು.
ಕೋಚ್ ಬಿ.ಸಿ. ರಮೇಶ್ ಅವರ ಗರಡಿಯಲ್ಲಿ ಪಳಗಿರುವ ಬುಲ್ಸ್ ಆಟಗಾರರು ರೇಡಿಂಗ್ ಮತ್ತು ಟ್ಯಾಕಲ್ ಎರಡರಲ್ಲಿ ಮಿಂಚಿದರೂ ಪದೇ ಪದೇ ಸಮನ್ವಯತೆ ಕಾಯ್ದುಕೊಳ್ಳಲು ಎಡವಿದರು. ಇದರ ನಡುವೆಯೂ 27ನೇ ನಿಮಿಷದಲ್ಲಿ ಸೂಪರ್ ಟ್ಯಾಕಲ್ ಮಾಡಿದ ಬುಲ್ಸ್ 22-21ರಲ್ಲಿ ಅಂತರ ಕಾಯ್ದುಕೊಂಡಿತು. ಪಂದ್ಯ ಮುಕ್ತಾಯಕ್ಕೆ ಹತ್ತು ನಿಮಿಷಗಳಿರುವಾಗ ಬುಲ್ಸ್ 24-23ರಲ್ಲಿ ಹಿಡಿತ ಸಾಧಿಸಿತು.
ವಿರಾಮದ ನಂತರ ಉಭಯ ತಂಡಗಳು ಮುನ್ನಡೆಗಾಗಿ ಹಲವು ಕಾರ್ಯತಂತ್ರಗಳೊಂದಿಗೆ ಅಖಾಡಕ್ಕಿಳಿದವು. ಲೀಗ್‌ನಲ್ಲಿ ಒಟ್ಟು 350 ರೇಡಿಂಗ್ ಪಾಯಿಂಟ್ಸ್ ಕಲೆಹಾಕಿದ ಆಕಾಶ್ ಅವರ ಚುರುಕಿನ ಆಟದಿಂದ ಬುಲ್ಸ್ 17-15ರಲ್ಲಿ ಮುನ್ನಡೆ ಸಾಧಿಸಿತು. ಆದರೆ 24ನೇ ನಿಮಿಷದಲ್ಲಿ ಸೂಪರ್ ರೇಡ್ ಮಾಡಿದ ಪಂಕಜ್ ಮೋಹಿತ್ ಪಲ್ಟನ್ ತಂಡಕ್ಕೆ 3 ಅಂಕಗಳನ್ನು ಕಲೆಹಾಕಿದರು. ಹೀಗಾಗಿ ಪುಣೇರಿ 18-17ರಲ್ಲಿಮತ್ತೆ ಮೇಲುಗೈ ಸಾಧಿಸಿತು.
ಸಮಬಲದ ಹೋರಾಟ
ಪ್ರಥಮಾರ್ಧದ ಮುಕ್ತಾಯಕ್ಕೆ ಉಭಯ ತಂಡಗಳು ಸಮಬಲದ ಹೋರಾಟ ನೀಡುವ ಮೂಲಕ ದ್ವಿತೀಯಾರ್ಧದ ಆಟವನ್ನು ಇನ್ನಷ್ಟು ತೀವ್ರಗೊಳಿಸಿದವು. ಆಕ್ರಮಣಕಾರಿ ಆಟವಾಡಿದ ಆಕಾಶ್ ಶಿಂದೆ 5 ಅಂಕಗಳನ್ನು ಕಲೆಹಾಕುವ ಮೂಲಕ ತಂಡದ ದಿಟ್ಟ ಹೋರಾಟಕ್ಕೆ ಸಾಕ್ಷಿಯಾದರು. ಅತ್ತ ಪುಣೇರಿ ಪಲ್ಟನ್ ತಂಡದ ಪರ ಆದಿತ್ಯ ಶಿಂದೆ ಮತ್ತು ಗೌರವ್ ಖತ್ರಿ ಕ್ರಮವಾಗಿ 6 ಹಾಗೂ 4 ಅಂಕ ಗಳಿಸಿ ಗಮನ ಸೆಳೆದರು.
ಮೊದಲ ಐದು ನಿಮಿಷದ ಆಟದಲ್ಲಿ 4-5ರಲ್ಲಿ ಅಲ್ಪ ಹಿನ್ನಡೆ ಅನುಭವಿಸಿದ ಮಾಜಿ ಚಾಂಪಿಯನ್ ಬುಲ್ಸ್, ಮೊದಲ ವಿರಾಮಕ್ಕೂ ಮುನ್ನ 7-8ರಲ್ಲಿಹೋರಾಟ ಸಂಘಟಿಸಿತು. ಬಳಿಕ ಆಕಾಶ್ ಶಿಂದೆ ಅವರ ಚುರುಕಿನ ರೇಡ್‌ನಿಂದಾಗಿ ಎರಡು ಅಂಕ ಕಲೆಹಾಕಿದ ಬುಲ್ಸ್ ತಂಡದ ಮುನ್ನಡೆಯನ್ನು 9-8ಕ್ಕೆ ಹಿಗ್ಗಿಸಿಕೊಂಡಿತು. ಇದರೊಂದಿಗೆ ಪಂದ್ಯದಲ್ಲಿಮೊದಲ ಬಾರಿಗೆ ಮೇಲುಗೈ ಸಾಧಿಸಿತು.ಆದರೆ ಸಮನ್ವಯತೆ ಕೊರೆತೆಯಿಂದಾಗಿ ಸ್ಥಿರತೆ ಕಾಯ್ದುಕೊಳ್ಳಲು ಬೆಂಗಳೂರು ತಂಡಕ್ಕೆ ಸಾಧ್ಯವಾಗಲಿಲ್ಲ. ಹೀಗಾಗಿ ಪುಣೇರಿ ತಂಡ 13-13ರಲ್ಲಿ ಹೋರಾಟ ನೀಡಿ ವಿರಾಮ ಪಡೆಯಿತು. ಬೆಂಗಳೂರು ಬುಲ್ಸ್ ತಂಡ ತನ್ನ ಎರಡನೇ ಪಂದ್ಯದಲ್ಲಿ ಸೆಪ್ಟೆಂಬರ್ 2ರಂದು ದಬಾಂಗ್ ದಿಲ್ಲಿ ತಂಡದ ಸವಾಲನ್ನು ಎದುರಿಸಲಿದೆ.



















